ಕಲಬುರಗಿ; ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ,ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಸಿದ ಸಾಮಾಜಿಕ ಹರಿಕಾರರು ದಿವಂಗತ ಡಿ ದೇವರಾಜು ಅರಸು ಆಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಕಾಲೇಜಿನ ಪ್ರಾಚಾರ್ಯ ಐ ಕೆ ಪಾಟೀಲ್ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದಿವಂಗತ ದೇವರಾಜ ಅರಸು ಅವರ 109 ನೇಯ ಜನ್ಮದಿನಾಚರಣೆ ಹಾಗೂ ಸದ್ಭಾವನಾ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
1972 ರಿಂದ 1977 ರ ವರೆಗೆ ಸಂಪೂರ್ಣ 5 ವರ್ಷಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ ಇವರು ಕರ್ನಾಟಕ ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ಪ್ರಪ್ರಥಮ ಹಿಂದುಳಿದ ಆಯೋಗ ರಚನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಸಮಾಜದಲ್ಲ ಬೇರೂರಿದ್ದ ಅನಿಷ್ಟ ಪದ್ಧತಿ ಜಿತ ಪದ್ಧತಿಯನ್ನು ನಿಷೇಧಿಸಿದರು. ಸದಾ ಬಡವರ ಕಲ್ಯಾಣಕ್ಕಾಗಿ ಚಿಂತಿಸುತ್ತಿದ್ದ ಇವರು ಬಡ ಜನರಿಗೆ ಭಾಗ್ಯ ಜ್ಯೋತಿಯನ್ನು ಜಾರಿಗೆ ತಂದ ನಾಡಿನ ಮೊದಲ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಹೇಳಿದರು.
ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಅಲ್ಪ ಸಂಖ್ಯಾತ ಇಲಾಖೆ, ಅಂಗವಿಕಲರಿಗೆ ಮಾಸಾಶನ, ಬಡ ದೀನ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದಂತ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಮೈಸೂರು ರಾಜ್ಯ ಎಂದು ಹೆಸರು ಪಡೆದಿದ್ದ ನಮ್ಮ ರಾಜ್ಯವನ್ನು 1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದರು.ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಸದಾ ಮೀಡಿಯುತ್ತದ್ದ ಇವರು ಕರ್ನಾಟಕ ರಾಜ್ಯದಲ್ಲಿ ಬಸ್ ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದರು. ಒಟ್ಟಾರೆಯಾಗಿ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಸಾಮಾಜಿಕ ಸಮೀಕರಣವನ್ನು ಬದಲಾಯಿಸಿದ ವ್ಯಕ್ತಿಯಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ.
ಆಂಗ್ಲ ಉಪನ್ಯಾಸಕಿ ಶ್ರೀಮತಿ ಕೃಷ್ಣವೇಣಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಉಪನ್ಯಾಸಕಿ ಸರೋಜಾದೇವಿ ಪಾಟೀಲ್ ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರಮಾಣವಚನ ಬೋಧಿಸಿದರು ಉಪನ್ಯಾಸಕರಾದ ಶ್ರೀ ರಾಮು ಕಟ್ಟಿಮನಿ, ಶ್ರೀಮತಿ ಸಂಗೀತಾ ಸಡಕೀನ್, ಭಾಗ್ಯಶ್ರೀ ಬೇನೂರ ಶ್ರೀಮತಿ ಅಶ್ವಿನಿ ಪಾಟೀಲ್ ಉಪಸ್ಥಿತರಿದ್ದರು ವಿಧ್ಯಾರ್ಥಿ ದತ್ತಾತ್ರೇಯ ವಠಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.