ಕಲಬುರಗಿ: ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ, ತ್ಯಾಗಮಯಿ. ಪರೋಪಕಾರಿ, ಶಿರಸಂಗಿ ಮನೆತನದ ಆಡಳಿತಗಾರ. ಅವರ ಆಡಳಿತ ವಿಶ್ವದ ಎಲ್ಲಾ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಹೇಳಿದರು.
ನಗರದ ಅಲ್ಲಂಪ್ರಭು ನಗರದಲ್ಲಿರುವ ‘ನೀಲಕಂಠೇಶ್ವರ ಪ್ರಾಥಮಿಕ ಶಾಲೆ’ಯಲ್ಲಿ ‘ಅಲ್ಲಂಪ್ರಭು ನಗರ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಶಿರಸಂಗಿ ಲಿಂಗರಾಜ ದೇಸಾಯಿಯವರ 118ನೇ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ದೇಸಾಯಿ ಅವರು 1904ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶದ ಮೊದಲ ಅಧ್ಯಕ್ಷರಾಗಿದ್ದರು. ಅವರಲ್ಲಿರುವ ಸಮಾಜಪರ ಕಾಳಜಿ ಅನುಕರಣೀಯವಾಗಿದೆ. ಶಿಕ್ಷಣ, ಕೃಷಿ, ನೀರಾವರಿಗೆ ಆದ್ಯತೆ ನೀಡಿದ್ದರು.
ಸಾಮಾಜಿಕ ಮೌಢ್ಯತೆ ವಿರುದ್ಧ ಶ್ರಮಿಸಿದ್ದಾರೆ. ನೂರಾರು ವರ್ಷಗಳ ಹಿಂದೆಯೇ ತಮ್ಮ 150 ಎಕರೆಯ ಹೊಲದಲ್ಲಿ ಕೃಷಿ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡುತ್ತಿದ್ದರು. ಸಮಾಜದಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕಾಗಿ ಇಡೀ ತಮ್ಮ ಆಸ್ತಿಯನ್ನು ದಾನ ಮಾಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಷಣ್ಮುಖಯ್ಯ ಸ್ವಾಮಿ, ಸದಸ್ಯ ಮಹಾಂತೇಶ ಎಸ್.ಸ್ವಾಮಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಚಿಂತಕ ಪಂಡಿತ ಪಾಟೀಲ, ಶಾಲೆಯ ಶಿಕ್ಷಕಿಯರಾದ ರಾಜೇಶ್ವರಿ ಕಟ್ಟಿಮನಿ, ನಿರ್ಮಲಾ ಮಾಲಿಪಾಟೀಲ, ಅಂಬಿಕಾ ಪ್ಯಾಟಿ, ಜಯಲಕ್ಷ್ಮೀ ಕಂತಿಮಠ, ಲಕ್ಷ್ಮೀ ಸರಡಗಿ, ಸುಮಿತಾ ಬೆಳಕೋಟಿ, ಆಶಾರಾಣಿ ಮುಗಳಿ, ಶಿವಲೀಲಾ ಪಾಟೀಲ ಹಾಗೂ ವಿದ್ಯಾರ್ಥಿಗಳಿದ್ದರು.