ಕಲಬುರಗಿ; ಜಿಲ್ಲೆಯ ವ್ಯಾಪ್ತಿಯ ಎಲ್ಲ ಗ್ರಾ.ಪಂ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರವನ್ನು ಸರ್ಕಾರದ ವತಿಯಿಂದಲೇ ಆರಂಭಿಸಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವುದರಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಹೆಸರು ಉದ್ದು ಬೆಳೆಯಲಾಗಿದೆ ಉದ್ದಿನ ರಾಶಿ ಆರಂಭವಾಗಿಲ್ಲ ಆದರೆ ಹೆಸರು ರಾಶಿ ಈಗಾಗಲೇ ಶೇ. 50 ಪೂರ್ಣಗೊಂಡಿದೆ. ಎಕರೆಗೆ 4ರಿಂದ 5 ಕ್ವಿಂಟಲ್ ಇಳುವರಿ ಬರುತ್ತಿದ್ದು ಆದರೆ ಸರ್ಕಾರದ ಖರೀದಿ ಕೇಂದ್ರವಿಲ್ಲದೇ ರೈತರು ಪರದಾಡುವಂತಾಗಿದೆ ಇದಕ್ಕಾಗಿ ಸರ್ಕಾರ ಗ್ರಾ.ಪಂ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಾರುಕಟ್ಟೆಯಲ್ಲಿ ದರ ಕುಸಿದಿದ್ದರಿಂದ ರೈತರು ನಷ್ಟಕ್ಕೊಳಗಾಗುವಂತೆ ಮಾಡಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಹೆಸರು ಕಾಳಿನ ದರವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಲ್‍ಗೆ 8682 ದರ ನಿಗದಿಪಡಿಸಿದೆ. ಉದ್ದಿನ ಕಾಳಿಗೆ ಪ್ರತಿ ಕ್ವಿಂಟಲ್‍ಗೆ 7400 ದರ ನಿಗದಿಪಡಿಸಿದೆ. ಸರ್ಕಾರದ ಈ ದರಕ್ಕೆ ಹೆಸರು ಮತ್ತು ಉದ್ದು ಖರೀದಿಸಿದರೆ ಬೆಳೆಗಾರರ ನೆರವಿಗೆ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರಕ್ಕೆ ನೈಜವಾಗಿ ರೈತರ ಬಗ್ಗೆ ಕಾಳಜಿಯಿದ್ದರೆ ತಕ್ಷಣ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಕಾಳು ಮತ್ತು ಉದ್ದಿನ ಕಾಳು ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.