ಹಳ್ಳಿ ಜನರಿಗೆ ಹೃದ್ರೋಗ ಸೇವೆ ತ್ವರಿತವಾಗಿ ಸಿಗಲು ಹಾರ್ಟ್ಲೈನ್ ಸೇವೆ ಜಾರಿ: ಡಾ.ಅಜಯ್ ಸಿಂಗ್

0
27

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಗ್ರಾಮೀಣ ಭಾಗದಲ್ಲಿ ಹೃದಯಾಘಾತ, ಹೃದಯಕ್ಕೆ ಸಂಬಮಧಿಸಿದಂತೆ ತೊಂದರೆ ಕಂಡುಬಂದಲ್ಲಿ ತಕ್ಷಣವೇ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ಹಬ್ & ಸ್ಪೋಕ್ ಮಾದರಿಯಲ್ಲಿ ಹಾರ್ಟ್ಲೈನ್ ಸೇವೆ ಆರಂಭಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳೀಯ ಅಧ್ಯಕ್ಷರು ಮತ್ತು ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.

ಬುಧವಾರ ಇಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ ಪ್ರದೇಶದ ಪ್ರತಿ ತಾಲೂಕಿಗೆ ಒಂದರಂತೆ 43 ಎ.ಎಲ್.ಎಸ್ ಮತ್ತು 7 ಬಿ.ಎಲ್.ಎಸ್. ಸೇರಿ ಒಟ್ಟು 50 ಅಂಬುಲೆನ್ಸ್ ಸೇವೆ ಮಂಡಳಿಯಿಂದಲೆ ಪೂರೈಸಲಾಗುತ್ತಿದೆ. ಅಂಬುಲೆನ್ಸ್ ಖರೀದಿ ಪ್ರಕ್ರಿಯೆ ಸಹ ನಡೆದಿದ್ದು, ನೂತನ ಜಯದೇವ ಆಸ್ಪತ್ರೆ ಕಾರ್ಯರಂಭವಾದ ನಂತರ ಈ ಸೇವೆ ಸಹ ಆರಂಭವಾಗಲಿದೆ ಎಂದರು.

Contact Your\'s Advertisement; 9902492681

ಈ ಅಂಬುಲೆನ್ಸ್ ಗಳು ರೋಗಿಯ ಮನೆಗೆ ಬಂದು ಗೋಲ್ಡನ್ ಹವರ್ ಎಂದು ಕರೆಯಲ್ಪಡುವ ಅವಧಿಯಲ್ಲಿ ಹತ್ತಿರದ ತಾಲೂಕಾ ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ಪಾರು ಮಾಡುವುದು ಮೊದಲ ಆದ್ಯತೆಯಾಗಿರಲಿದೆ. ನಂತರ ಜಯದೇವ ಆಸ್ಪತ್ರೆಯ ವೈದ್ಯರೊಂದಿಗೆ ಹಬ್ & ಸ್ಪೋಕ್ ಮಾದರಿಯಲ್ಲಿ ಟೆಲಿ ಸೇವೆ ಮುಖಾಂತರ ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದು ತದನಂತರ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ ಎಂದು ಹಾರ್ಟ್ ಲೈನ್ ಸೇವೆಯ ವಿವರ ನೀಡಿದ ಡಾ.ಅಜಯ್ ಸಿಂಗ್, ಪ್ರತಿಷ್ಠಿತ ಆಸ್ಪತ್ರೆಯ ಸೇವೆ ಪ್ರದೇಶದ ಕಟ್ಟ ಕಡೆಯ ಮನುಷ್ಯನಿಗೂ ಸಿಗಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದರು.

ರಾಯಚೂರಿನಲ್ಲಿ ಹ್ಯೂಮನ್ ಜಿನೋಮ್ ಸೆಂಟರ್ ಸ್ಥಾಪನೆಗೆ ಕಳೆದ ತಿಂಗಳೇ ಅಡಿಗಲ್ಲು ಹಾಕಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಮುಂದೂಡಿದ್ದು, ಶೀಘ್ರವೆ ಅಡಿಗಲ್ಲು ಹಾಕಲಾಗುವುದು. ಕಲಬುರಗಿ ನಗರದ ಖರ್ಗೆ ವೃತ್ತದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ನೆನೆಗುದ್ದಿಗೆ ಬಿದ್ದಿದ್ದು ತಮ್ಮ ಗಮನಕ್ಕೆ ಬಂದಿದ್ದು, ಮುಂದಿನ ದಿನದಲ್ಲಿ ಇದನ್ನು ಸೂಕ್ತವಾಗಿ ಪರಿಶೀಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಡಾ.ಅಜಯ್ ಸಿಂಗ್ ಉತ್ತರಿಸಿದರು.

ಕಲಬುರಗಿಯಲ್ಲಿ ಪರಿಷ್ಕೃತ 220.65 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಕೆ.ಕೆ.ಆರ್.ಡಿ.ಬಿ. ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯ ಬಹುತೇಕ ಕಾಮಗಾರಿ ಮುಗಿದಿದ್ದು, ಸೆಪ್ಟೆಂಬರ್ ಮಾಹೆಯಲ್ಲಿ ಇದರ ಲೋಕಾರ್ಪಣೆ ಮಾಡಲಾಗುವುದು ಎಂದು ಡಾ.ಜಯ್ ಸಿಂಗ್ ಹೇಳಿದರು.

ಈ ಆಸ್ಪತ್ರೆ ನಿರ್ಮಾಣದ ನಂತರ ಪ್ರದೇಶದ ಜನರು ಹೃದ್ರೋಗ ಚಿಕಿತ್ಸೆಗೆ ದೂರದ ಬೆಂಗಳೂರು, ಹೈದ್ರಾಬಾದ ಹೋಗುವುದು ತಪ್ಪಲಿದೆ. ಇಲ್ಲಿಯೆ ಗುಣಮಟ್ಟದ ಚಿಕಿತ್ಸೆ ಸಿಗಲಿದೆ ಎಂದ ಅವರು, ಕೆ.ಕೆ.ಆರ್.ಡಿ.ಬಿ. ಮಂಡಳಿ ಸಥಾಪನೆಯಿಂದ ಪ್ರದೇಶದಲ್ಲಿ ಅಭಿವೃಧ್ಧಿಯ ಹೊಸ ಪರ್ವ ಕಾಣಲು ಸಾಧ್ಯವಾಗಿದೆ ಎಂದರು.

371ಜೆ ಕಾಯ್ದೆ ಜಾರಿಗೆ ಬಂದು ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಾಯ್ದೆಯ ಸವಿನೆನಪಿಗೆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 371ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಜಿಮ್ಸ್ ನಲ್ಲಿರುವ 130 ಹಾಸಿಗೆಯಿಂದ 371 ಸಾಮರ್ಥ್ಯಕ್ಕೆ ಹೆಚ್ಚಳವಾಗುವುದರಿಂದ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಭರ್ತಿ ಸಹ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡಿಕೊಳ್ಳಲಿದೆ. ಆಸ್ಪತ್ರೆ ಆವರಣದಲ್ಲಿ ಸೀವೆಜ್ ಟ್ರೀಟ್‌ಮೆಂಟ್ ಪ್ಲ್ಯಾಂಟ್ ಸೇರಿ ಇನ್ನಿತರ ಮೂಲಸೌಕರ್ಯಕ್ಕೆ 40 ಕೋಟಿ ರೂ. ಕೇಳಿದ್ದು, ಅದನ್ನು ಸಹ ಮಂಡಳಿ ಮ್ಯಾಕ್ರೋ ಅನುದಾನದಲ್ಲಿ ನೀಡಲಿದೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಮುಖಂಡ ನೀಲಕಂಠರಾವ ಮೂಲಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here