ಸುರಪುರ: ದೇಶದಲ್ಲಿರುವ ಎಲ್ಲರು ಮೊದಲು ಭಾರತೀಯರು ಆದ್ದರಿಂದ ಎಲ್ಲರು ನಮ್ಮದು ಭಾರತೀಯತೆ ಧರ್ಮ ಎಂದು ಭಾವಿಸಿ ಎಲ್ಲಾ ಹಬ್ಬಗಳನ್ನು ಸಾಮರಸ್ಯ ದಿಂದ ಆಚರಿಸುವಂತೆ ಡಿವೈಎಸ್ಪಿ ಜಾವಿದ್ ಇನಾಂದಾರ್ ತಿಳಿಸಿದರು.
ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಬಸವಾದಿ ಶರಣರು ಸಮಾನತೆಯನ್ನು ಬೋಧಿಸಿದಂತೆ,ಹಿಂದು ಮುಸ್ಲಿಂ ಎನ್ನದೆ ಇವನಾರವ ಇನಾರವ ಎನ್ನದೆ ಇವನಮ್ಮವ ಎಂದು ಭಾವಿಸಿ ಪರಸ್ಪರ ಶಾಂತಿ ಸೌಹಾರ್ದತೆಯೊಂದಿಗೆ ಎಲ್ಲರು ಸೇರಿ ಗಣೇಶ ಹಬ್ಬವನ್ನು ಆಚರಿಸಿ.ಅಲ್ಲದೆ ಸರಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲನೆಯೊಂದಿಗೆ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.
ಪಿಐ ಆನಂದ ವಾಗಮೊಡೆ ಮಾತನಾಡಿ,ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು ಈವರ್ಷವೂ ಕೂಡ ಎಲ್ಲರು ಸ್ನೇಹ ಸೌಹಾರ್ದದಿಂದ ಗಣೇಶ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.
ಅಲ್ಲದೆ ಗಣೇಶನನ್ನು ಕೂಡಿಸುವವರು ಜೆಸ್ಕಾಂ,ಸ್ಥಳದ ಪರವಾನಿಗೆ,ಧ್ವನಿ ವರ್ಧಕದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ.ಈ ಎಲ್ಲಾ ಪರವಾನಿಗೆ ಒಂದೇ ಕಡೆಗೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಅಲ್ಲದೆ ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು ಹಾಗೂ ಸ್ವಯಂ ಸೇವಕರನ್ನು ನೇಮಿಸಿಕೊಳ್ಳ ಬೇಕು,ಸ್ವಯಂ ಸೇವಕರಿಗೆ ನಮ್ಮ ಇಲಾಖೆಯಿಂದ ಬ್ಯಾಡ್ಜ್‍ಗಳನ್ನು ನೀಡುವುದಾಗಿ ತಿಳಿಸಿದರು.
ಗಣೇಶನ ಪರವಾನಿಗೆ ಪಡೆಯುವಾಗಲೇ ಎಷ್ಟನೆ ದಿನಕ್ಕೆ ವಿಸರ್ಜನೆ ಮಾಡುವುದನ್ನು ತಿಳಿಸಬೇಕು ಮತ್ತು ಯಾವ ಮಾರ್ಗದಲ್ಲಿ ಮೆರವಣಿಗೆ ಮಾಡುವುದನ್ನು ಕಡ್ಡಾಯವಾಗಿ ತಿಳಿಸಬೇಕು ಮತ್ತು ಯಾವುದೇ ರೀತಿಯ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಡುಗಳನ್ನು ಹಚ್ಚುವುದಾಗಲಿ,ಬೇರೊಬ್ಬರ ನಿಂದನೆಯ ವರ್ತನೆಯನ್ನು ತೋರ ಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನಮ್ಮ ಸುರಪುರ ಇತಿಹಾಸದಲ್ಲಿ ಇಲ್ಲಿ ಎಲ್ಲಾ ಜಾತಿ,ಧರ್ಮದವರು ಒಂದಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು,ಹಿಂದೆ ಸರ್ದಾರ ವಲ್ಲಭ ಬಾಯ್ ಪಟೇಲ್ ವೃತ್ತದ ರಮಣಪ್ಪನ ಕಟ್ಟೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರೆ ಮೊದಲು ಗಣೇಶನನ್ನು ಕೂಡಿಸಿ ಹಬ್ಬವನ್ನು ಆಚರಿಸಿರುವುದಾಗಿ ತಿಳಿಸಿದರು.ಅಲ್ಲದೆ 1894ರಲ್ಲಿ ಪುಣೆಯ ಕೇಸರಿ ವಾಡ್‍ದಲ್ಲಿ ಬಾಲಗಂಗಾಧರ ತಿಲಕ ಅವರು ಮೊದಲು ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನು ಒಂದುಗೂಡಿಸಲು ಗಣೇಶ ಹಬ್ಬ ಆರಂಭಿಸಿದರು. ಅದರಂತೆ ನಾವು ಕೂಡ ಭಾರತ ಮಾತೆಯ ಮಕ್ಕಳೆಂದು ಒಂದಾಗಿ ಹಬ್ಬವನ್ನು ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಅಲಿಂ ಗೋಗಿ,ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ,ಅಹೈಮದ್ ಪಠಾಣ್,ಶರಣು ನಾಯಕ ರಾಮ್ ಸೇನಾ,ಶಿವಲಿಂಗ ಹಸನಾಪುರ,ಸಚಿನಕುಮಾರ ನಾಯಕ,ದಾನಪ್ಪ ಕಡಿಮನಿ,ಚನ್ನಪ್ಪ ದೇವಾಪುರ ಹಾಗೂ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿದರು.
ಸಭೆಯಲ್ಲಿ ಜೆಸ್ಕಾಂ ಇಲಾಖೆ ಎಇಇ ರಫಿಕ್,ಶಾಂತಪ್ಪ ಹಾಗೂ ಮುಖಂಡರಾದ ಭೀಮನಗೌಡ,ಯಂಕೋಬ ಬಿರಾದಾರ,ಅಬಿದ್ ಹುಸೇನ್,ರಮೇಶ ಅರಕೇರಿ,ಶರಣು ನಾಯಕ ದಿವಳಗುಡ್ಡ,ಎಮ್.ಪಟೇಲ್,ಹಂಪಯ್ಯಸ್ವಾಮಿ ಬೋನ್ಹಾಳ,ಭಾಗನಾಥ ಗುತ್ತೇದಾರ,ವಿಶ್ವನಾಥ ಹೊಸ್ಮನಿ,ಹಣಮಂತ ಬಿಲ್ಲವ್,ಪ್ರಶಾಂತ ಉಗ್ರಂ,ವೆಂಕಟೇಶ ದೇವಾಪುರ,ವಿರೇಶ ಪ್ಯಾಪ್ಲಿ,ಗಣೇಶ ಪ್ಯಾಪ್ಲಿ,ಚಂದ್ರು ಅವಂಟಿ,ಅಬಿದ್ ಅಲಿ,ಎಮ್.ಡಿ. ಯೂಸೂಫ್,ಶರಣಬಸಪ್ಪ ಸೇರಿದಂತೆ ಅನೇಕರಿದ್ದರು. ಪೊಲೀಸ್ ಪೇದೆ ದಯಾನಂದ ಜಮಾದಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.