ರೈಲು ಸಂಖ್ಯೆ ಹೆಚ್ಚಳ ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

0
22

ಶಹಾಬಾದ; ಕಲಬುರಗಿ ಮತ್ತು ಬೆಂಗಳೂರು ಕಡೆ ಹೋಗುವ ರೈಲ್ವೆಗಳ ಸಂಖ್ಯೆ ಹೆಚ್ಚಿಸಲು, ಜರ್ನಲ್ ಮತ್ತು ಸ್ಲೀಪರ್ ಬೋಗಿಗಳು ಹೆಚ್ಚಿಸುವಂತೆ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ದೇಶವ್ಯಾಪಿ ಹಮ್ಮಿಕೊಂಡ ಸಹಿ ಸಂಗ್ರಹದ ಅಂಗವಾಗಿ ಇಂದು ಶಹಾಬಾದ ರೈಲ್ವೆ ನಿಲ್ದಾಣದ ಎದುರುಗಡೆ ಎಐಡಿವೈಓ ಯುವಜನ ಸಂಘಟನೆಯು ಜನರ ಸಹಿಸಂಗ್ರಹಣೆ ಮಾಡಲಾಯಿತು.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆ (Iಖ) ಯು ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಜನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ದಶಕಗಳಿಂದ ಭಾರತೀಯ ರೈಲ್ವೆಯನ್ನು ಕಟ್ಟಿ ಬೆಳೆಸಿ, ಪ್ರತೀ ಬಜೆಟ್‌ನಲ್ಲಿಯೂ ವಿಸ್ತರಿಸುತ್ತಾ ಬರಲಾಗಿತ್ತು. ಆದರೀಗ ಕ್ರಮೇಣವಾಗಿ ದುರ್ಬಲಗೊಳಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡ ಕ್ರಮಗಳಿಂದ ಪ್ರತಿ ವರ್ಷವೂ ಇದು ತೀವ್ರಗೊಳ್ಳುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ದೂರ ಯಾನದ ರೈಲುಗಳಲ್ಲಿನ ಪ್ರಯಾಣವು ದುಸ್ಸಾಧ್ಯವಾಗಿದೆ ಮತ್ತು ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ಎಂಬುದು ತೀವ್ರ ಆತಂಕಕಾರಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ | ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023ರ ಅಂಕಿಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. ಶುಚಿತ್ವ, ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ.

ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುವಂತೆ ಆನರ್ಹರಾದ ಅಥವಾ ಸೂಕ್ತ ಅರ್ಹತೆ ಇಲ್ಲದ ಜನರನ್ನು ನೇಮಿಸಿಕೊಳ್ಳುತ್ತಾರೆ. ಇನ್ನೂ ಲೋಕೋ ಪೈಲಟ್‌ಗಳ ಕೊರತೆಯೂ ಇದೆ. 2019 ರಿಂದ 2023 ರವರೆಗೆ ಒಟ್ಟು 162 ರೈಲು ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 118 ಹಳಿತಪ್ಪುವಿಕೆಗಳು ಮತ್ತು ಹದಿನಾರು ಒಂದಕ್ಕೊಂದು ಡಿಕ್ಕಿ ಅಪಘಾತಗಳು ಸೇರಿವೆ. ಖಾಲಿ ಹುದ್ದೆಗಳು ಭರ್ತಿಯಾಗದಿರುವುದರಿಂದಲೇ 2ನೇ ಜೂನ್ 2023ರ ಬಾಲಸೋರ್, ಒರಿಸ್ಸಾದಂತಹ ಅಪಘಾತಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.

ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ವಲಸೆ ಕಾರ್ಮಿಕರು ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ಸಾರ್ವಜನಿಕ ಸೇವೆಗಳು ಮತ್ತು ಖಾಸಗಿ ವಲಯಗಳಲ್ಲಿ ದಿನಗೂಲಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅಂಗಡಿಗಳು, ಹೋಟೆಲ್‌ಗಳು, ಸಣ್ಣ ಕಾರ್ಖಾನೆಗಳು ಮತ್ತು ಕೃಷಿಯಲ್ಲಿಯೂ ಸಹ ಅವರನ್ನು ಅಗ್ಗದ ಕೂಲಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ ಮತ್ತು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಇಂತಹ ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಪ್ರಯಾಣಿಸತ್ತಿದ್ದಾರೆ ಎಂದರು.

ಇದೆಲ್ಲದರ ಪರಿಣಾಮವಾಗಿ, ಪ್ರತಿ ರೈಲುಗಳೂ ಜನದಟ್ಟಣೆಯಿಂದ ಓಡುತ್ತಿವೆ, ಇದರ ನಿವಾರಣೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ಕಾಯ್ದಿರಿಸದ (Uಖ) ಮತ್ತು ಸ್ವೀಪರ್ (Sಐ) ರೈಲುಗಳು ತುಂಬಾ ಜನದಟ್ಟಣೆಯಿಂದ ಕೂಡಿದ್ದು, ಶೌಚಾಲಯಗಳ ಒಳಗೆ ಸಹ 8 ರಿಂದ 10 ಜನರು ತಮ್ಮ ಸ್ಥಳಗಳನ್ನು ತಲುಪಲು ಹೇಗಾದರೂ ಜಾಗ ಮಾಡಿಕೊಂಡು ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲ್ವೆ ಅಧಿಕಾರಿಗಳು ಕಾಯ್ದಿರಿಸದ (ಯುಆರ್) ಬೋಗಿಗಳು ಮತ್ತು ಸ್ವೀಪರ್ ಕ್ಲಾಸ್ (ಎಸ್‌ಎಲ್) ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಅವುಗಳ ಸಂಖ್ಯೆಯನ್ನು ಮೊಟಕುಗೊಳಿಸುತ್ತಿದ್ದಾರೆ ಬದಲಿಗೆ ಎಸಿ ಬೋಗಿಗಳನ್ನು ಹೆಚ್ಚಿಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಯಲ್ಲಿ ಇಂತಹ ಲಾಭದಾಹ ಯಾತಕ್ಕಾಗಿ? ರೈಲ್ವೆ ಇಲಾಖೆಯು ಜನರ ಈ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ ಎಂದು ತಿಳಿಸಿದರು.

ಇಂತಹ ಹೀನಾಯ ಸನ್ನಿವೇಶದಲ್ಲಿ ನಾಗರಿಕ ಪ್ರಯಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರವು ಪ್ರಧಾನಿ ಮೋದಿಯವರಿಂದ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುತ್ತಲೇ ಇದೆ. ಈ ರೈಳುಗಳ ದರವು ಸಾಮಾನ್ಯ ಸೂಪರ್ ಫಾಸ್ಟ್‌ಗಿಂತ ಆರರಿಂದ ಎಂಟು ಪಟ್ಟು ಹೆಚ್ಚಾಗಿದೆ. ಮಧ್ಯಮ ವರ್ಗದವರೂ ಸಹ ಅದನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯ ಜನರಿಗೆ ಅಗತ್ಯಕ್ಕೆ ಅನುಗುಣವಾಗಿ ರೈಲು ಸಂಖ್ಯೆ ಹೆಚ್ಚಿಸಿ ,ಜರ್ನಲ್ ಮತ್ತು ಸ್ಲಿಪರ್ರಬೋಗಿಗಳು ಹೆಚ್ಚಿಸುವಂತೆ ಎಐಡಿವೈಓ ಸಂಘಟನೆಯು ದೇಶದ ವಿವಿಧ ಕಡೆ ಜನಸಾಮಾನ್ಯರ ಹಾಗೂ ರೈಲ್ವೆ ಪ್ರಯಾಣಿಕರ ಸಹಿ ಸಂಗ್ರಹಸಿ ದಿನಾಂಕ 12 ಸೆಪ್ಟೆಂಬರ್ ರಂದು ಹಮ್ಮಿಕೊಂಡ ಅಖಿಲ ಭಾರತ ಪ್ರತಿಭಟನಾ ದಿನದಂದು ಪ್ರತಿಭಟಿಸಿ ಮಾನ್ಯ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವವರಿಗೆ ಸಂಗ್ರಹಿಸಿದ ಸಹಿಗಳ ಪ್ರತಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಅದ್ಯಕ್ಷರಾದ ಜಗನ್ನಾಥ ಎಸ್ ಹೆಚ್, ರಘು ಪವಾರ, ರಮೇಶ ದೇವಕರ್, ಮಲ್ಲಿಕಾರ್ಜುನ, ಅಜಯ್ ಗುರ್ಜಲ್ಕರ್ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here