ಕಲಬುರಗಿ: ವಿದ್ಯಾರ್ಥಿಗಳ ಜ್ಞಾನಗ್ರಹಿಕೆ ಅರಿತು ಕಲಿಸುವವನೇ ನಿಜವಾದ ಶಿಕ್ಷಕ ಎಂದು ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ರವೀಂದ್ರ ಪಾಲ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ “ರಾಷ್ಟ್ರೀಯ ಶಿಕ್ಷಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬಂದಿರುವ ವಿದ್ಯಾರ್ಥಿಗಳು ಶಿಕ್ಷಕರು ಬೋಧನೆ ಮಾಡಿದಂತಹ ಸಂದರ್ಭಗಳನ್ನು ಜೀವನ ಪೂರ್ತಿ ನೆನಪಿಸಿಕೊಳ್ಳುತ್ತಾರೆ.
ಪ್ರಸ್ತುತ ತಂತ್ರಜ್ಞಾನ ಸಾಧನ ನೆರವಿನ ಕೌಶಲ ಕಲಿಕೆ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಎಂದ ಅವರು ತಂತ್ರಜ್ಞಾನ ಒಳಗೊಂಡ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪ್ರೇರಣೆ ಸಿಗುತ್ತದೆ. ಸಮಾಜದಲ್ಲಿ ಗೌರವ ಮತ್ತು ಮಾನವೀಯ ಬಾಂಧವ್ಯದಿಂದ ಬದುಕುವ ಚೈತನ್ಯವನ್ನು ಶಿಕ್ಷಕ ಮತ್ತು ಶಿಕ್ಷಣ ನೀಡಲಿದೆ ಎಂದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಮಕಾಲೀನ ಜಗತ್ತನ್ನು ಪರಿಚಯಿಸಿ ವಿಮರ್ಶಾತ್ಮಕ ಗುಣವನ್ನು ಬೆಳೆಸಬೇಕು. ಪಂಡಿತ್ ರಮಾಬಾಯಿ, ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡಿದರು, ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿರುವುದು ಶಿಕ್ಷಣದ ಮೌಲ್ಯ ಮತ್ತು ಆದರ್ಶ ಶಿಕ್ಷಕರ ಪಾತ್ರವೇನು ಎಂಬುದು ತಿಳಿಯಲಿದೆ. “ಶಿಕ್ಷಣವು ಆತ್ಮವಿಶ್ವಾಸವನ್ನು, ಆತ್ಮವಿಶ್ವಾಸವು ಭರವಸೆಯನ್ನು, ಭರವಸೆಯು ಶಾಂತಿಯನ್ನು ಹುಟ್ಟುಹಾಕುತ್ತದೆ.” ಎಂಬ ಕನ್ಫ್ಯೂಷಿಯಸ್ ಅವರ ಸಂದೇಶ ಶಿಕ್ಷಣದ ಮಹತ್ವ ಮತ್ತು ಮೌಲ್ಯವನ್ನು ಸಾಕ್ಷಿಕರಿಸುತ್ತದೆ.
ಶಿಕ್ಷಣ ಮನುಷ್ಯನಲ್ಲಿ ಶಾಂತಿ ಸ್ಥಾಪನೆ ಮಹತ್ವವನ್ನು ಹೇಳುತ್ತದೆ. ಒಬ್ಬ ಶಿಕ್ಷಕ ಶಾಶ್ವತತೆಯ ಮೇಲೆ ಪ್ರಭಾವ ಬೀರುತ್ತಾನೆ. ಅವನು ನೇರವಾಗಿ ಮಾನವ ಆತ್ಮದ ಮೇಲೆ ಪ್ರಭಾವ ಬೀರುತ್ತಾನೆ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣವು ಜೀವನಕ್ಕೆ ಸಿದ್ಧತೆಯಲ್ಲ, ಶಿಕ್ಷಣವೇ ಜೀವನ ಆಗಿದೆ. ವಿದ್ಯಾರ್ಥಿಗಳ ಜೀವನದಲ್ಲಿನ ನಡೆ- ನುಡಿ, ವ್ಯಕ್ತಿತ್ವ ಮತ್ತು ಭವಿಷ್ಯ ಶಿಕ್ಷಣದಿಂದ ಮಾತ್ರ ಸಿಗಲಿದೆ ಎಂದ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.
ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ , ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಹೇಗೆ ಉನ್ನತ ಗುರಿಗಳನ್ನು ಹೊಂದಿದ್ದರು ಅವರಂತೆ ಶಿಕ್ಷಕರು ಉನ್ನತ ಗುರಿಗಳನ್ನು ಅಳವಡಿಸಿಕೊಂಡು ಆದರ್ಶ ಸಮಾಜದ ಪರಿವರ್ತನೆಗೆ ಶ್ರಮಿಸಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜನಾಳ್ಕರ ಲಕ್ಷ್ಮಣ, ಪ್ರೊ ಮೇಧಾವಿನಿ ಕಟ್ಟಿ , ಸಮಾಜ ವಿಜ್ಞಾನ ನಿಕಾಯ ಡೀನರು ಪ್ರೊ. ಗುರು ಶ್ರೀರಾಮುಲು , ಕಲಾ ನಿಕಾಯ ಡೀನ್ ಪ್ರೊ ಅಬ್ದುಲ್ ರಬ ಉಸ್ತಾದ್, ವಾಣಿಜ್ಯ ನಿಕಾಯ ಡೀನ್ ಪ್ರೊ. ಎ. ಪಿ. ಹೊಸಮನಿ , ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಾನೂನು ನಿಕಾಯ ಡೀನ ಪ್ರೊ. ದೇವಿದಾಸ ಮಾಲೆ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ರಮೇಶ್ ಲಂಡನ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಜಯಾ ದಾನಮ್ಮನವರ್ ಸ್ವಾಗತಗೀತೆ ಹಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್. ಜಿ. ಕಣ್ಣೂರು ವಂದಿಸಿದರು.