ಕಲಬುರಗಿ: ಇತ್ತೇಚೆಗೆ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಹೆಸರು, ಉದ್ದು, ಸೋಯಾ ಅವರೆ ಹಾಗೂ ತೊಗರಿ ಬೆಳೆಗಳು ಹಾನಿಯಾಗಿದ್ದು, ದೂರು ನೀಡಿದ ಎಲ್ಲಾ ರೈತರ ಹೊಲಗಳಿಗೆ 2-3 ದಿನದಲ್ಲಿ ಭೇಟಿ ಮಾಡಿ ಕ್ಷೇತ್ರ ತಪಾಸಣೆ ಮಾಡುವಂತೆ ಇಪ್ಕೋ-ಟೋಕಿಯೋ ಜನರಲ್ ಇನ್ಶುರೆನ್ಸ್ ಕಂಪನಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದ ಬೆಳೆ ಹಾನಿಯಾಗಿದ್ದರಿಂದ ಸ್ಥಳೀಯ ಪ್ರಕೃತಿ ವಿಕೋಪದಡಿ 23,719 ರೈತರು ಟೋಲ್ ಫ್ರೀ ಮುಖಾಂತರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಖುದ್ದಾಗಿ ಬಂದು ದೂರು ನೀಡಿದ್ದು, ಇದರಲ್ಲಿ 3,369 ರೈತರ ಕ್ಷೇತ್ರಗಳಿಗೆ ವಿಮಾ ಕಂಪನಿ ಸಿಬ್ಬಂದಿಗಳು ಭೇಟಿ ನೀಡಿರುತ್ತಾರೆ ಎಂದು ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದಾಗ ಇದಕ್ಕೆ ಡಿ.ಸಿ. ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇನ್ಶುರೆನ್ಸ್ ಕಂಪನಿಯ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗೆ ನೋಟೀಸ್ ನೀಡುವಂತೆ ಸೂಚನೆ ನೀಡಿದರು.
ಅಲ್ಲದೆ ಟೋಲ್ ಫ್ರೀ ಸಂಖ್ಯೆ ಸರಿಯಾಗಿ ಕೆಲಸ ಮಾಡದಿವುದರಿಂದ ರೈತರಿಗೆ ದೂರು ನೀಡಲು ಕಷ್ಟವಾಗುತ್ತದೆ. ಕೂಡಲೆ ಇದನ್ನು ಸರಿಪಡಿಸಬೇಕು. ದೂರು ನೀಡಿದ ರೈತರ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಬೇಕು ಎಂದು ವಿಮಾ ಸಂಸ್ಥೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಉಪನಿರ್ದೇಶಕ ಸೋಮಶೇಖರ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.