ಕಲಬುರಗಿ ಮಟ್ಟದ 24 ಶಿಕ್ಷಕರಿಗೆ ಉತ್ತಮ ಪ್ರಶಸ್ತಿ ಪ್ರದಾನ

0
17

ಕಲಬುರಗಿ: ಗ್ರಾಮೀಣ ಭಾಗದ ಮಕ್ಕಳು ಇಂದಿಗೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಶಿಕ್ಷಕರು ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಹೇಳಿದರು.

ಗುರುವಾರ ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ ಮಠ ಶ್ರೀ ಸಿದ್ಧಶ್ರೀ ಡಿವೈನ್ ಪ್ಯಾಲೇಸ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಾಗ ಫೇಲ್ ಆದವರ ಸಂಖ್ಯೆ ನೋಡಿದಾಗ ಹೆಚ್ಚು ಕಂಡು ಬರುವುದೇ ಗ್ರಾಮೀಣ ಭಾಗದ ಮಕ್ಕಳು. ಸರ್ಕಾರದ ಕೆಲವೊಂದು ತಪ್ಪು ನೀತಿ, ಗಣಿತ-ವಿಜ್ಞಾನ ಶಿಕ್ಷಕರ ಕೊರತೆ, ಸೂಕ್ತ ಪ್ರಯೋಗಾಲವು ಇಲ್ಲದಿರುವುದು ಇದಕ್ಕೆ ಕಾರಣವಾಗಿರಬಹುದು. ಇದರ ಹೊರತಾಗಿಯೂ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳ ಮೇಲೆ ಹೆಚ್ಚು ಗಮನಹರಿಸಿದಲ್ಲಿ ಅವರು ಸಹ ಮುಂದೆ ಬರಲು ಸಾಧ್ಯ ಇದೆ ಎಂದ ಅವರು, ಇದರಲ್ಲಿ ಅನೇಕರು ಪ್ರತಿಭಾನ್ವಿತರು ಇದ್ದಾರೆ, ಆದರೆ ಬಹುತೇಕರಿಗೆ ಅವಕಾಶ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಕೃಪಾಂಕ ಜಾರಿಗೆ ತನ್ನಿ: ಹಿಂದೆ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಉದ್ಯೋಗ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ ಮೀಸಲಾತಿ ನೀಡಿದ ಪರಿಣಾಮ ಅನೇಕರು ಇಂದು ವಿವಿಧ ಇಲಾಖೆಯ ಸರ್ಕಾರಿ ಹುದ್ದೆಯಲ್ಲಿದ್ದಾರೆ. ತದನಂತರ ಸುಪ್ರೀಂ ಕೋರ್ಟ್ ಇದನ್ನು ತೆಗೆದುಹಾಕಿತ್ತು. ಆದರೆ ಗ್ರಾಮೀಣ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಗ್ರಾಮೀಣ ಕೃಪಾಂಕ ಅವಶ್ಯಕತೆ ಇದೆ ಎಂದು ಬಿ.ಆರ್.ಪಾಟೀಲ ಪ್ರತಿಪಾದಿಸಿದರು.

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು: ಸದೃಢ ದೇಶ ಮತ್ತು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಶಿಕ್ಷಕರಿಂದ ಮಾತ್ರ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಅಭಿಪ್ರಾಯಪಟ್ಟರು.

ಶಿಕ್ಷಕರ ದಿನಾಚರಣೆಯಂದು ಇಂದು ಕೆಲವು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಉಳಿದ ಶಿಕ್ಷಕರು ಅರ್ಹರಿಲ್ಲವಂತಲ್ಲ. ಪರದೆ ಮುಂದೆ ಬರದೇಯೂ ಅನೇಕ ಶಿಕ್ಷಕರು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಕರ ಸೇವೆ ಶ್ಲಾಘಿಸಿದ ಅವರು, ಶಿಕ್ಷಕರ ಸಮಸ್ಯೆಗಳ ಕುರಿತು ಶೀಘ್ರವೇ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದರು.

ಶಾಲೆಗೆ ಮಕ್ಕಳ ಗೈರು ದೊಡ್ಡ ಸಮಸ್ಯೆಯಾಗಿದ್ದು, ಇದು ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ. ಗೈರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಕರು ಪಾಲಕರ ಮನವೊಲಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದ ಅವರು, ಫಲಿತಾಂಶ ಸುಧಾರಣೆಗೆ ತಜ್ಞರ ಸಮಿತಿ ರಚಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಕೆ.ಕೆ.ಆರ್.ಡಿ.ಬಿ. ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶೇ.25ರಷ್ಟು ಹಣ ಆಕ್ಷರ ಆವಿಷ್ಕಾರಕ್ಕೆ ಮೀಸಲಿಡಲಾಗಿದೆ. ಕಳೆದ ವರ್ಷ ಶಾಲಾ ಕೊಠಡಿ ದುರಸ್ತಿ, ಕಲಿಕಾ ಸಾಮಗ್ರಿ ಪೂರೈಕೆ ಹೀಗೆ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು.

24 ಶಿಕ್ಷಕರಿಗೆ ಉತ್ತಮ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದಿಂದ 16 ಹಾಗೂ ಪ್ರೌಢ ವಿಭಾಗದಿಂದ 8 ಜನ ಸೇರಿ ಒಟ್ಟು 24 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿ ಶಿಕ್ಷಕರಿಗೆ ತಲಾ 5,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಫಲ ತಾಂಬೂಲ ನೀಡಿ ಸತ್ಕರಿಸಲಾಯಿತು.

ಪ್ರಾಥಮಿಕ ವಿಭಾಗದಲ್ಲಿ ಸೇಡಂ ತಾಲೂಕಿನ ಈರ್ನಾಪಲ್ಲಿ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಚಂದ್ರಕಲಾ ಮತ್ತು ಸಿದ್ದಿಪೇಟ್ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಅನ್ನಪೂರ್ಣ ಎಸ್.ಬಾನರ್, ಕಲಬುರಗಿ (ದ) ತಾಲೂಕಿನ ಬಸನಾಳ ಸ.ಮಾ.ಪ್ರಾ ಶಾಲೆಯ ಸಹ ಶಿಕ್ಷಕಿ ಸುನಂದಾ ಚೌಧರಿ ಮತ್ತು ಫರಹತಾಬಾದ ಸ.ಮಾ.ಪ್ರಾ ಶಾಲೆಯ ಸಹ ಶಿಕ್ಷಕಿ ಶಾಂತಾಬಾಯಿ ಸೋಮಶೇಖರ್ ಸಜ್ಜನ, ಕಲಬುರಗಿ(ಉ) ತಾಲೂಕಿನ ಕುಮಸಿ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಧನರಾಜ ಎಂ. ಮಠಪತಿ, ಚಿಂಚೋಳಿ ತಾಲೂಕಿನ ಗೌಡಪ್ಪಗುಡಿ ತಾಂಡಾ ಸ.ಪ್ರಾ ಶಾಲೆಯ ಸಹ ಶಿಕ್ಷಕ ಉತ್ತಮ ಎ. ದೊಡ್ಡಮನಿ ಮತ್ತು ಐನೋಳ್ಳಿ ಸ.ಮಾ.ಪ್ರಾ ಶಾಲೆಯ ಸಹ ಶಿಕ್ಷಕಿ ಸರೂಬಾಯಿ ಎಮ್. ಕುಂಬಾರ, ಚಿತ್ತಾಪೂರ ತಾಲೂಕಿನ ಗೋಳಾ.ಕೆ ನಿಜಾಮನಗರ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕ ನಜೀರ್ ಎಮ್. ಮುಲ್ಲಾ, ಕಾಳಗಿ ಸ.ಮಾ.ಪ್ರಾ ಶಾಲೆಯ ಸಹ ಶಿಕ್ಷಕಿ ಸರ್ವಮಂಗಳ ಹಾಗೂ ಯರಗಲ್ ತಾಂಡಾ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕಿ ಗುಂಡಮ್ಮ ಎ. ಅಲ್ಲಮ್ಮ, ಜೇವರ್ಗಿ ತಾಲೂಕಿನ ಮಳ್ಳಿ ಗಾಂಧಿ ನಗರ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕ ನಿಂಗಪ್ಪ ರೂಗಿ, ಅಫಜಲಪೂರ ತಾಲೂಕಿನ ಅಫಜಲಪೂರ ಸ.ಉ.ಪ್ರಾ ಶಾಲೆಯ ಸಹ ಶಿಕ್ಷಕಿ ಆಲಿಯಾ ಬೇಗಂ, ಅವರಳ್ಳಿ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಗೀತಾ ದುತ್ತರಗಿ ಹಾಗೂ ಗೊಬ್ಬೂರ ಬಿ. ಸ.ಮಾ.ಪ್ರಾ ಶಾಲೆಯ ಸಹ ಶಿಕ್ಷಕಿ ನೀಲಮ್ಮ ರಾಚಯ್ಯಾ ಬಾಳ್ಳಿ, ಆಳಂದ ತಾಲೂಕಿನ ನೇಕಾರ ಕಾಲೋನಿ ಸ.ಹಿ.ಪ್ರಾ ಶಾಲೆಯ ಮುಖ್ಯ ಗುರುಗಳಾದ ಚಂದುಬಾಯಿ ಕಾಸರ್ ಮತ್ತು ಆಶ್ರಯ ಕಾಲೋನಿ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕ ಅಂಬಾರಾಯ ಗುಂಡಪ್ಪ ಕಾಂಬಳೆ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇನ್ನು ಪ್ರೌಢ ವಿಭಾಗದಿಂದ ಸೇಡಂ ತಾಲೂಕಿನ ಯಡಗಾ ಸ.ಪ್ರೌ ಶಾಲೆಯ ಸಹ ಶಿಕ್ಷಕ ವೀರೇಶ ಸಜ್ಜನ ಮತ್ತು ಬಟಗೇರಾ(ಬಿ) ಸ.ಪ್ರೌ. ಶಾಲೆಯ ವೃತ್ತಿ ಶಿಕ್ಷಕ ಶಿವಪ್ರಸಾದ, ಕಲಬುರಗಿ(ದ) ತಾಲೂಕಿನ ಫರಹತಾಬಾದ ಸ.ಉ.ಪ್ರೌ. ಶಾಲೆಯ ಸಹ ಶಿಕ್ಷಕಿ ಸೈಯದ್ ಅರಸಿಯಾ ತರನ್ನುಮ್, ಚಿತ್ತಾಪೂರ ತಾಲೂಕಿನ ಇಂಗಳಗಿ ಸ.ಪ್ರೌ. ಶಾಲೆಯ ಸಹ ಶಿಕ್ಷಕ ಬಸಪ್ಪ ಮುಗಳಖೋಡ, ಜೇವರ್ಗಿ ತಾಲೂಕಿನ ಕೂಡಿ ದರ್ಗಾ ಸ.ಪ್ರೌ. ಶಾಲೆಯ ಸಹ ಶಿಕ್ಷಕ ರವಿ ಜಾಧವ, ಆಫಜಲಪೂರ ತಾಲೂಕಿನ ಘತ್ತರಗಾ ಸ.ಪ್ರೌ. ಶಾಲೆಯ ಸಹ ಶಿಕ್ಷಕ ಶಿವಶರಣಪ್ಪ ಶಾಂತಮಲ್ಲಪ್ಪ ಗುಂದಗಿ, ಆಳಂದ ತಾಲೂಕಿನ ಹಿರೋಳ್ಳಿ ಸ.ಪ್ರೌ. ಶಾಲೆಯ ಸಹ ಶಿಕ್ಷಕ ಧರ್ಮರಾಯ ಕೋರಳ್ಳಿ ಹಾಗೂ ಆಳಂದ ತಾಲೂಕಿನ ಮಟಕಿ ಸ.ಪ್ರೌ. ಶಾಲೆಯ ಸಂಗೀತ ಶಿಕ್ಷಕ ಶಂಕ್ರಪ್ಪ ಬಿ. ಹೂಗಾರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಆರಂಭಕ್ಕು ಮುನ್ನ ಡಾ. ಸರ್ವಪಲ್ಲಿ ರಾಧಾಕೃಷ್ಣ ಮತ್ತು ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಣ್ಯರು ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಕಮಲಾಪುರ ಡಯಟ್ ಪ್ರಾಂಶುಪಾಲ ನಿಂಗಪ್ಪ ವಾಯ್, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಮುಖ್ಯಗುರುಗಳ ಸಂಘದ ಜಿಲ್ಲಾಧ್ಯಕ್ಷ ಮರೆಪ್ಪ ಎಂ. ಬಸವಪಟ್ಟಣ, ಕರ್ನಾಟಕ ರಾಜ್ಯ ಪಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜು ದೊಡ್ಡಮನಿ, ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಸೂಫಿ ಸೇರಿದಂತೆ ಶಿಕ್ಷಣ ಇಲಾಖೆಯ ಅನೇಕ ಅಧಿಕಾರಿಗಳು, ತಾಲೂಕಾ ಬಿ.ಇ.ಓ. ಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಿಕ್ಷಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here