ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಅನಿಲಕುಮಾರ ಸೇಲರ್ ಗುರು-ಶಿಷ್ಯರ ಸಂಬಂಧವು ತುಂಬಾ ಪರಿಶುದ್ಧ ಮತ್ತು ಪವಿತ್ರವಾದದ್ದು. ಹಿಂದಿನ ಕಾಲದಲ್ಲಿ ಗುರುವಿಗಾಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿ ಕೊಟ್ಟ ಏಕಲವ್ಯ ನಮಗೆ ಪುರಾಣದಿಂದ ಕಾಣಸಿಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧ ಕಡಿಮೆಯಾಗುತ್ತಿದೆ. ಈಗಿನ ಕಾಲದಲ್ಲಿ ಹಿರಿಯರನ್ನು ಗೌರವಿಸುವ ಮನಃಸ್ಥಿತಿ ಮಕ್ಕಳಲ್ಲಿ ಬೆಳೆಸುವುದು ಅತ್ಯವಶ್ಯಕ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಗಮೇಶ ಸರಡಗಿ ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಕಿನತ್ತ ಕರೆದೊಯ್ಯುವ ಜ್ಯೋತಿಯೇ ಗುರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ದಾಸವಾಣಿಯಂತೆ ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ, ಸ್ಪೂರ್ತಿ ತುಂಬಿ ವಿದ್ಯಾರ್ಥಿಗಳೊಳಗಿರುವ ಪ್ರತಿಭೆಯನ್ನು ಒಡೆದೆಬ್ಬಿಸಿ ಸಜ್ಜನ ಸಮಾಜ ರೂಪಿಸುವವರು ಗುರುಗಳು. ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ನಾವೆಂದು ತೀರಿಸಲು ಸಾಧ್ಯವಿಲ್ಲ. ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು. ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ನಮ್ಮ ಜತೆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಕುಮಾರ ಶೆಟ್ಟಿ, ವಿರೇಶ ಬೋಳಶೆಟ್ಟಿ, ಸೂರ್ಯಕಾಂತ ಸಾವಳಗಿ, ಶ್ರೀನಿವಾಸ ಬುಜ್ಜಿ, ಬಾಲಕೃಷ್ಣ ಕುಲಕರ್ಣಿ, ಬಸವರಾಜ ಹೆಳವರ ಯಾಳಗಿ, ವಿನೋದ ಪಡನೂರ, ಚಂದ್ರು ಮಲ್ಕಾಪುರೆ, ಸುನೀಲ ಪುಜಾರಿ, ನರಸಿಂಗ ಕಟ್ಕೆ ಹಾಗೂ ಇನ್ನಿತರರಿದ್ದರು.