ವಾಡಿ: ಶಿಲೆಗೆ ಪ್ರಾಣಪ್ರತಿಷ್ಠೆ ನೀಡಿ ಪೂಜೆಗೆ ಅರ್ಹವಾಗಿಸುವ ಭರದಲ್ಲಿ ಶಿವಲಿಂಗದ ಮೇಲೆ ಪಾದವಿಟ್ಟು ಅಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ ದಿಗ್ಗಾಂವ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ತಕ್ಷಣವೇ ಭಕ್ತರಿಗೆ ಕ್ಷಮೆಯಾಚಿಸಬೇಕು ಎಂದು ಪಟ್ಟಣದ ಆರ್‍ಟಿಐ ಕಾರ್ಯಕರ್ತ ಸಿದ್ದು ಪಂಚಾಳ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಂಚಾಳ, ದಿಗ್ಗಾಂವ ಶ್ರೀಗಳ ಅಧಾರ್ಮಿಕ ನಡೆಯನ್ನು ಖಂಡಿಸಿದ್ದಾರೆ. ಶಿವಲಿಂಗವನ್ನು ದೇವರೆಂದು ಪೂಜಿಸುವ ಶಿವಭಕ್ತರು, ಕ್ಷೀರಾಭೀಷೇಕ ಮಾಡಿ ಭಕ್ತಿ ಮೆರೆಯುತ್ತಾರೆ.
ಅಂತಹದ್ದರಲ್ಲಿ ಸ್ವಾಮೀಜಿ ಎಂದು ಹೇಳಿಕೊಳ್ಳುವವರೇ ಶಿವಲಿಂಗದ ಮೇಲೆ ಪಾದಗಳನ್ನಿಟ್ಟು ಪಾದಪೂಜೆ ಮಾಡಿಸಿಕೊಂಡಿರುವುದು ಸರಿಯಲ್ಲ.
ಧರ್ಮ ಶಾಸ್ತ್ರಗಳು ಅದೇನು ಹೇಳುತ್ತವೋ ಸಾಮಾನ್ಯ ಭಕ್ತರಿಗೆ ಗೊತ್ತಿರುವುದಿಲ್ಲ. ಲಿಂಗ ಪೂಜೆಯನ್ನು ಅತ್ಯಂತ ಪವಿತ್ರ ಭಾವನೆಯಿಂದ ನೆರವೇರಿಸುವವರಿಗೆ ಸ್ವಾಮೀಜಿಯ ವರ್ತನೆ ಸಹಿಸಲಾಗುತ್ತಿಲ್ಲ. ಶ್ರೀಗಳು ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಭಕ್ತರ ಭಾವನೆಗಳಿಗೆ ಬೆಲೆ ಕೊಟ್ಟು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.