ವಾಡಿಯಲ್ಲಿ ಸೆ.22 ರಂದು ಜನ ಧ್ವನಿ ಸಮಾವೇಶ: ಬಸ್ ನಿಲ್ದಾಣ-ಕಾಲೇಜಿಗಾಗಿ ಹೋರಾಟ

0
117

ವಾಡಿ: ಮೂಲಭೂತ ಸೌಕರ್ಯ ಸೇರಿದಂತೆ ಸರ್ಕಾರಿ ಕಾಲೇಜು, ಬಸ್ ನಿಲ್ದಾಣ, ಗ್ರಂಥಾಲಯ, ಕ್ರೀಡಾಂಗಣ, ರೈಲ್ವೆ ಒಳ ಸೇತುವೆ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಆಗ್ರಹಿಸಿ ಸೆ.22 ರಂದು ಬೆಳಗ್ಗೆ 10:30ಕ್ಕೆ ವಾಡಿ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಾಲಾ ಮೈದಾನದಲ್ಲಿ ಜನ ಧ್ವನಿ ಜಾಗೃತ ಸಮಿತಿ ವತಿಯಿಂದ ಸಮಾವೇಶ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ತಿಳಿಸಿದರು.

ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ವಾಡಿ ನಗರ ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಕ್ರೀಡಾಪಟುಗಳು, ಪ್ರಯಾಣಿಕರು ಕಡು ಕಷ್ಟ ಅನುಭವಿಸುವಂತಾಗಿದೆ.

Contact Your\'s Advertisement; 9902492681

ನಗರದಲ್ಲಿ 11 ಪ್ರೌಢ ಶಾಲೆಗಳು ಮತ್ತು 23 ಪ್ರಾಥಮಿಕ ಶಾಲೆಗಳಿದ್ದರೂ ಸರಕಾರಿ ಕಾಲೇಜಿನ ಸೌಲಭ್ಯವಿಲ್ಲ. ಸ್ಥಳೀಯ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣಕ್ಕಾಗಿ ವಿವಿಧ ನಗರಗಳಿಗೆ ಪ್ರಯಾಣ ಬೆಳೆಸಬೇಕಾದ ಸ್ಥಿತಿಯಿದೆ. ಪ್ರತಿನಿತ್ಯ ನಲವತ್ತಕ್ಕೂ ಹೆಚ್ಚು ಬಸ್‍ಗಳು ವಾಡಿ ನಗರ ಪ್ರವೇಶಿಸಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರಗಳತ್ತ ಸಂಚರಿಸುತ್ತವೆ. ಆದರೆ ಪ್ರಯಾಣಿಕರಿಗೆ ಬಸ್ ನಿಲ್ದಾಣ ವ್ಯವಸ್ಥೆಯಿಲ್ಲ. ರಸ್ತೆ ಮೇಲೆ ನಿಂತು ಬಸ್‍ಗಳಿಗಾಗಿ ಕಾಯುತ್ತಾರೆ. ಜನರ ಈ ಗೋಳಾಟ ಧಿಕಾರಿಗಳಿಗಾಗಲಿ ಕ್ಷೇತ್ರದ ಜನಪ್ರತಿನಿಧಿಗಾಗಲಿ ಅರ್ಥವಾಗುತ್ತಿಲ್ಲ ಎಂದು ದೂರಿದರು.

ಜನರ ಪ್ರಮುಖ ಬೇಡಿಕೆಗಳಾದ ಸರಕಾರಿ ಕಾಲೇಜು ಸ್ಥಾಪನೆ, ಬಸ್ ನಿಲ್ದಾಣ, ರೈಲ್ವೆ ಒಳಸೇತುವೆ, ಸಾರ್ವಜನಿಕ ಗ್ರಂಥಾಲಯ, ಶೌಚಾಲಯ, ಉದ್ಯಾನವನ, ಕ್ರೀಡಾಂಗಣ, ವಾಡಿ ನಗರದಿಂದ ಕಲಬುರಗಿ ವರೆಗೆ ಫಲಕನಾಮಾ ಪ್ಯಾಸೆಂಜರ್ ರೈಲು ಸಂಚಾರ ಸೇರಿದಂತೆ ಇತರ ಸೌಲಭ್ಯಗಳು ಮರೀಚಿಕೆಯಾಗಿವೆ. ಘನತ್ಯಾಜ್ಯ ವಿಲೇವಾರಿ, ಚರಂಡಿಗಳ ಸ್ವಚ್ಚತೆ, ಕುಡಿಯಲು ಶುದ್ಧ ನೀರಿಗಾಗಿ ಅನೇಕ ಸಲ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಪತ್ರ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಈ ಸಲ ಜನರ ಸಹಭಾಗಿತ್ವದಲ್ಲಿ ಸಮಾವೇಶ ಆಯೋಜಿಸುವ ಮೂಲಕ ಬೃಹತ್ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿರುವ ವಿವಿಧ ಬಡಾವಣೆಗಳ ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡಲು ಉತ್ಸುಕರಾಗಿದ್ದಾರೆ. ವಾಡಿ ನಗರದ ಸಮಗ್ರ ಅಭಿವೃದ್ಧಿಯಾಗುವ ವರೆಗೆ ನಮ್ಮ ಜನ ಧ್ವನಿ ಸಮಿತಿಯ ಹೋರಾಟ ನಿರಂತರವಾಗಲಿದೆ ಎಂದರು.

ಜನ ಧ್ವನಿ ಜಾಗೃತ ಸಮಿತಿಯ ಗೌರವ ಸಲಹೆಗಾರರಾದ ಜಯದೇವ ಜೋಗಿಕಲ್‍ಮಠ, ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ, ಕಾರ್ಯದರ್ಶಿ ಅಲ್ಲಾಭಕ್ಷ್, ಮುಖಂಡರಾದ ಶಿವಪ್ಪ ಮುಂಡರಗಿ, ಯೂಸೂಫ್ ಮುಲ್ಲಾ ಕಮರವಾಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here