ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮ ಅವಶ್ಯವಾಗಿದ್ದು: ಡಾ. ಸತೀಶಕುಮಾರ ಹೊಸಮನಿ

0
113

ಕಲಬುರಗಿ : ಮನುಷ್ಯನ ವೈಯಕ್ತಿಕ ಆರೋಗ್ಯ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮ ಅವಶ್ಯವಾಗಿದ್ದು, ಪುರಾಣ, ಪ್ರವಚನ, ಪುಣ್ಯ ಕಥೆಗಳು ಮನುಷ್ಯನ ಬದುಕಿನಲ್ಲಿ ನೈತಿಕ ಮೌಲ್ಯ, ಸದ್ಗುಣ ಗಳನ್ನು ತುಂಬಿ ವ್ಯಕ್ತಿಯನ್ನು ಬೆಳಕಿನೆಡೆ ಕೊಂಡೊಯ್ಯಲು ಸಹಕಾರಿಯಾಗಲಿವೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ನಿರ್ದೇಶಕರಾದ ಡಾ. ಸತೀಶಕುಮಾರ ಹೊಸಮನಿ ಪ್ರತಿಪಾದಿಸಿದರು.

ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ ಸರಡಗಿ ಮತ್ತು ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಗೋಕುಲ ನಗರದ ಸಾಂಸ್ಕೃತಿಕ ಭವನದಲ್ಲಿ ಹುಣ್ಣಿಮೆಯ ಅಂಗವಾಗಿ ಬೆಳಕಿನೆಡೆಗೆ ಮಾಸಿಕ ಶಿವನುಭವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪೂರ್ವಜರು ಭಜನೆ, ಕೀರ್ತನೆ, ಸತ್ಸಂಗದ ಮೂಲಕ ಸಮಾಜದಲ್ಲಿ ಒಗ್ಗಟ್ಟು, ಏಕತೆ ಮೂಡಿಸಿಕೊಂಡು ಬಂದು ಸಧೃಢ ಸಮಾಜ ನಿರ್ಮಿಸಿ ಹೋಗಿದ್ದಾರೆ. ಆದರೆ ಇಂದು ನಾವು ಆಧುನಿಕತೆಯ ಕೊಡುಗೆಗಳಾದ ಮೊಬೈಲ್, ಕಂಪ್ಯೂಟರ್, ಟಿ.ವಿ.ಗಳ ದಾಸರಾಗಿ ಒಗ್ಗಟ್ಟಿನಿಂದ ದೂರ ಹೋಗಿ ಏಕಾಂಗಿತನ ಅನುಭವಿಸುತ್ತಿದ್ದೇವೆ. ಇದರಿಂದ ಮನುಷ್ಯನಿಗೆ ಆತ್ಮಸ್ಥೈರ್ಯ ಕಡಿಮೆಯಾಗಿ ನೆರಳಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೊಸಮನಿಯವರು ವಿವರಿಸಿದರು.

Contact Your\'s Advertisement; 9902492681

ಬಸವಾದಿ ಶಿವಶರಣರ ಕಾಯಕ ಮತ್ತು ದಾಸೋಹ ಪ್ರಜ್ಞೆ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಕಲ್ಯಾಣ ರಜ್ಯ ನಿರ್ಮಾಣ ಮಾಡಲು ಸಧ್ಯವಾಗಿದ್ದು ಸತ್ಯ ಶುದ್ಧ ಕಾಯಕ ಮನುಷ್ಯನನ್ನು ಬಹು ಎತ್ತರಕ್ಕೆ ಒಯ್ಯಲಿದೆ ಎಂದು ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ನುಡಿದರು.

ಸಮಾರಂಭದಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು ಇಂದು ಎಲ್ಲೆಡೆ ಭ್ರಷ್ಠಾಚಾರ ದುರ್ಮಾರ್ಗದ ಮೂಲಕ ಹಣ ಗಳಿಕೆ, ಸಂಪತ್ತು ಕೂಡಿಕರಣ ಕಾಣುತ್ತಿದ್ದೇವೆ. ಇದು ನಶ್ವರವಾಗಿದ್ದು ನೆಮ್ಮದಿ, ಭ್ರಾತೃತ್ವ, ಜೀವನವೇ ಅಮೂಲ್ಯವಾಗಿದೆ. ಬೌತಿಕ ವಸ್ತುಗಳು ಕೇವಲ ನಮ್ಮನ್ನು ಮನೋರಂಜನೆ ಗೊಳಿಸುತ್ತವೆ, ಆದರೆ ಆತ್ಮ ತೃಪ್ತಿ ನೀಡಲಾರವು ಎಂದು ಪ್ರತಿಪಾದಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ಪೂಜ್ಯ ಡಾ. ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿ ನಗರ ಪ್ರದೇಶಗಳ ಮಹಿಳೆಯರು ಧಾರವಾಹಿಗಳಿಂದ ಹೊರಬಂದು ಆಧ್ಯಾತ್ಮದಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದ್ದು, ಈ ದಿಶೆಯಲ್ಲಿ ಶ್ರೀಮಠ ಮತ್ತು ಮಹಾಂತಜ್ಯೋತಿ ಪ್ರತಿಷ್ಠಾನದಿಂದ ಪ್ರತಿ ಹುಣ್ಣಿಮೆಗೊಮ್ಮೆ ಭಗವಂತನ ಕುರಿತು ನಾಮಸ್ಮರಣೆ ಮಾಡಲು ಬೆಳಕಿನೆಡೆಗೆ ಶಿವಾನುಭವ ಚಿಂತನ ಏರ್ಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಅಜಯಕುಮಾರ ಡಿ., ಮಾತೋಶ್ರೀ ಕಸ್ತೂರಿಬಾಯಿ ರುದ್ರಸ್ವಾಮಿ ಮಠ ಸಾಹಿತಿಗಳಾದ ಕೆ.ಎಸ್.ಬಂಧು ಕಲಾವಿದರಾದ ಬಸವರಾಜ ಸಾಲಿ, ಉದ್ದಿಮೆದಾರರಾದ ರವಿ ಸರಸಂಬಿ ವೇದಿಕೆ ಮೆಲೆ ಉಪಸ್ಥಿತರಿದ್ದರು. ಕಲಾವಿದರಾದ ಜಗದೀಶ ಶರಣರು ಪ್ರಾರ್ಥಿಸಿದರು. ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶಿವರಾಜ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಗೌರವ ಅಧ್ಯಕ್ಷರಾದ ಜಿ.ಡಿ.ಅಣಕಲ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿಯವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಸಮಾರಂಭದಲ್ಲಿ ಗುರುಬಾಯಿ ವಸ್ತ್ರದ, ಮಾಯಾ ಪಾಟೀಲ, ಸವಿತಾ ಜಗತಿ, ಶಾಂತಾ ವಾಲಿ, ಮಹಾನಂದಾ ಬಿರಾದಾರ, ಲಕ್ಷ್ಮೀ ಪಾಟೀಲ ಸೇರಿದಂತೆ ಬಡಾವಣೆಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here