ಕಲಬುರಗಿ: ಅಧಿಕಾರಿಗಳು ದೈನಂದಿನ ತಮ್ಮ ಕೆಲಸ ಕಾರ್ಯಗಳ ಜೊತೆಗೆ ದೇಶದ ಮುಂದಿನ ಪ್ರಜೆಗಳಾಗಿರುವ ಮಕ್ಕಳಲ್ಲಿ ಹೋರಾಟದ ಛಲ, ಸರ್ವರನ್ನು ಸಮಾನವಾಗಿ ಕಾಣುವ ಗುಣ, ಸಾಧನೆಯ ಮೆಟ್ಟಿಲುಗಳನ್ನು ತಿಳಿಹೇಳಬೇಕಾಗಿದೆ ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶ ಭವಿಷ್ಯ ಭದ್ರವಾಗಿರಬೇಕಾದರೆ ಮಕ್ಕಳಿಗೆ ಗುಣಾತ್ಮಕ ಮತ್ತು ಮೌಲ್ಯಯುತ ಶಿಕ್ಷಣ ನೀಡಬೇಕು ಎಂದರು.
ಜಿಲ್ಲೆಯ ಹಿರಿಯ ಅಧಿಕಾರಿಗಳು ಅಗಾಗ ಗ್ರಾಮೀಣ ಭಾಗದಲ್ಲಿನ ಶಾಲೆ, ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆಯಬೇಕು. ಶೇ.60ರಷ್ಟು ಎಸ್.ಸಿ-ಎಸ್.ಟಿ ಮಕ್ಕಳು ಸಿಗುವುದು ಇಲ್ಲಿ. ಮಕ್ಕಳ ಸಮಸ್ಯೆ ಆಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಐ.ಎ.ಎಸ್., ಐ.ಪಿ.ಎಸ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕಂಡ ಮಕ್ಕಳಲ್ಲಿ ತಾವು ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಛಲ ಹುಟ್ಟಿಕೊಳ್ಳುತ್ತದೆ. ನೀವೆ ಅವರಿಗೆ ರೋಲ್ ಮಾಡೆಲ್ ಆಗುತ್ತೀರಿ ಎಂದು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳೇ ಸ್ಥಳೀಯವಾಗಿ ಸರ್ಕಾರದ ಪ್ರತಿನಿಧಿಗಳು ಇದ್ದಂತೆ. ಹಿಂದುಳಿದ ಈ ಪ್ರದೇಶದಲ್ಲಿ ಅಪೌಷ್ಟಿಕತೆ, ಬಡತನ ಹೆಚ್ಚಿದೆ. ಇದನ್ನು ನಿವಾರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾಣೆಯಾಗಬೇಕಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಅಭಿವೃದ್ಧಿಗೆಂದೆ 371ಜೆ ಕಾಯ್ದೆ ತಂದಿದ್ದು, ಕೆ.ಕೆ.ಆರ್.ಡಿ.ಬಿ ಮಂಡಳಿಗೆ ಅನುದಾನ ಹರಿದು ಬರುತ್ತಿದೆ. ಅಭಿವೃದ್ಧಿ ಕೆಲಸ ಕಾರ್ಯಗಳ ಜೊತೆಗೆ ಜನರ ಕಣ್ಣೀರು ಒರೆಸುವ ಕೆಲಸ ಅಧಿಕಾರಿಗಳು ಮಾಡಬೇಕಿದೆ ಎಂದರು.