ಅಧಿಕಾರಿಗಳ ಗೈರು- ಹೊನಗುಂಟಾ ಗ್ರಾಮದಲ್ಲಿ ಕಾಟಾಚಾರಕ್ಕೆ ನಡೆದ ಜನಸ್ಪಂದನ ಸಭೆ

0
113

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ತಹಸೀಲ್ದಾರ ಜಗದೀಶ ಚೌರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಗೈರುಹಾಜರಿಯಾಗಿದ್ದರಿಂದ ಕಾಟಾಚಾರಕ್ಕೆ ನಡೆದಂತೆ ಕಂಡುಬಂತು.

ಸರಕಾರದ ಯೋಜನೆಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರಕಾರ ಜನಸ್ಪಂದನ ಸಭೆ ಆಯೋಜಿಸಿ, ಆ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಥಳೀಯವಾಗಿ ಪರಿಹಾರ ಕಲ್ಪಿಸಲು ನೆರವಾಗಬೇಕಿದ್ದ ಸಭೆ ಅಧಿಕಾರಿಗಳು ಇಲ್ಲದೇ ಬಿಕೋ ಎನ್ನುತ್ತಿತ್ತು.

Contact Your\'s Advertisement; 9902492681

ತಹಸೀಲ್ದಾರ್ ಜಗದೀಶ ಚೌರ್ ಸಭೆ ಉದ್ಘಾಟಿಸಿ, ಜನಸ್ಪಂದನಾ ಸಭೆಯಲ್ಲಿ ರೈತರು, ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು. ತಾಲೂಕಾಡಳಿತ ಈ ಬಗ್ಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುತ್ತದೆ ಎಂದರು.

ಜನಸ್ಪಂದನಾ ಸಭೆಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಆದರೆ, ಕೇವಲ ನಾಲ್ಕೈದು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದು ಬಿಟ್ಟರೆ, ಉಳಿದ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸ್ಥಳೀಯ ಗ್ರಾ.ಪಂ. ಪಿಡಿಒ ಗೈರು ಹಾಜರಾಗದ್ದಕ್ಕೆ ಕರವೇ ತಾಲೂಕಾಧ್ಯಕ್ಷ ವಿಶ್ವನಾಥ ಫಿರೋಜಾಬಾದ, ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಜನರು ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಕೇಳಲು ಹಾಗೂ ಮನವಿ ಸಲ್ಲಿಸಲು ಮುಂದಾದಾಗ ಸ್ಥಳೀಯ ಪಿಡಿಓ ಅಥವಾ ಕಾರ್ಯದರ್ಶಿ ಸಂಬಂಧಪಟ್ಟ ತಾಪಂ ಇಓ ಇರಲಿಲ್ಲ. ಅಲ್ಲದೇ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಇರಲಿಲ್ಲ. ಗ್ರಾಮದಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನೆ ಕೇಳಬೇಕೆಂದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದಿರಲಿಲ್ಲ. ಪಡಿತರ ಆಹಾರದ ಬಗ್ಗೆ ಕೇಳುಬೇಕೆಂದರೆ ಅವರು ಇರಲಿಲ್ಲ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಕುಡಿತದಿಂದ ಅಶಾಂತಿ ಮೂಡತ್ತಿದ್ದು. ಈ ಬಗ್ಗೆ ತಿಳಿಸಬೇಕೆಂದರೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಬಂದಿರಲಿಲ್ಲ.ಹೀಗೆ ಕೆಇಬಿ,ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಬರದಿರುವುದಕ್ಕೆ ತಹಸೀಲ್ದಾರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಕರವೇ ತಾಲೂಕಾಧ್ಯಕ್ಷ ವಿಶ್ವನಾಥ ಫಿರೋಜಾಬಾದ, ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕೇಳುವ ಪ್ರಶ್ನೆಗೆ ತಹಸೀಲ್ದಾರ ಹತ್ತಿರ ಉತ್ತರವಿರಲಿಲ್ಲ. ಅಧಿಕಾರಿಗಳನ್ನು ಮೇಲಾಧಿಕಾರಿಯಾಗಿ ಹಿಡಿತದಲ್ಲಿಟ್ಟುಕೊಳ್ಳಬೇಕು.ಕೂಡಲೇ ಗೈರು ಹಾಜರಾದ ಅಧಿಕಾರಿಗಳು ವಿರುದ್ಧ ಕ್ರಮಕೈಗೊಳ್ಳಬೇಕು.ಅಲ್ಲದೇ ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಅಧಿಕಾರಿ ವರ್ಗದವರೊಂದಿಗೆ 15 ದಿನಗೊಳಗಾಗಿ ಮತ್ತೆ ನಡೆಸಬೇಕು.ಇಲ್ಲದಿದ್ದರೇ ಎಲ್ಲಾ ಸಂಘಟನೆ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪಿ.ಎಸ್.ಮೇತ್ರಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here