- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ:: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಳ್ಳದ ನೀರು 110 ರಿಂದ 120 ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಆಹಾರ ಸಾಮಾಗ್ರಿಗಳು ಹಾನಿಯಾಗಿರುವ ಘಟನೆ ಚಿತ್ತಾಪುರ ತಾಲೂಕಿನಲ್ಲಿ ದಿಗ್ಗಾಂವ ಗ್ರಾಮದಲ್ಲಿ ಸಂಭವಿಸಿದೆ.
ಇಟಗಾ ಗ್ರಾಮದ ಸಮೀಪದ ಓರಿಯಂಟ್ ಸಿಮೆಂಟ್ ಕಂಪೆನಿಯ ಮಶೀನರಿಗಳಲ್ಲಿ, ಕಚೇರಿ ಹಾಗೂ ಆವರಣದಲ್ಲಿ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟ್ಟಾಗಿರುವ ಮಾಹಿತಿ ತಿಳಿದು ಬಂದಿದೆ.
ಬೆಳೆ ಸಂಪೂರ್ಣ ಹಾನಿ; ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಂಡೋತಿ, ಭಾಗೋಡಿ, ಮುಡಬೂಳ, ಮರಗೋಳ, ದಿಗ್ಗಾಂವ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಲ್ಲಿ ಮಳೆ ನೀರು ನುಗ್ಗಿ ತೊಗರಿ ಬೆಳೆ ಹಾನಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮನೆಗಳಲ್ಲಿ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಆಹಾರ ಸಾಮಾಗ್ರಿಗಳು ಹಾಳಾಗಿದ್ದು, ಸರಕಾರದಿಂದ ಸಿಗಬೇಕಾದ ಪರಿಹಾರ ಒದಗಿಸಿ ಕೊಡಲಾಗುವುದು ಎಂದು ತಿಳಿಸಿದ ಅವರು ದಿಗ್ಗಾಂವ ಗ್ರಾಮದಲ್ಲಿ ರಾತ್ರಿ ಮಳೆ ರೀಕಾರ್ಡ್ ಮಾಡಿದೆ ಎಂದರು.
ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ್, ಸಿದ್ದಣ್ಣಗೌಡ ಆರ್.ಡಿ, ಶ್ರೀಮಂತ ಗುತ್ತೇದಾರ, ಶರಣು ಸೇರಿದಂತೆ ಇತರರು ಇದ್ದರು.
ಚಿತ್ತಾಪುರ ಪಟ್ಟಣದಲ್ಲಿ 53.6 ಮಿ.ಮೀ, ಗುಂಡಗುರ್ತಿ ವಲಯದಲ್ಲಿ 0.0 ಮಿ.ಮೀ, ನಾಲವಾರ ವಲಯದಲ್ಲಿ 20.2 ಮಿ.ಮೀ, ಅಳ್ಳೋಳ್ಳಿ ವಲಯದಲ್ಲಿ 20.2 ಮಿ.ಮೀ ಮಳೆಯಾಗಿದೆ.