ಕಲಬುರಗಿ: ರಿಯಲ್ ಎಸ್ಟೇಟ್ ಸಂಬಂಧಿತವಾಗಿದ್ದ ಹಳೆಯ ವೈಷ್ಯಮ್ಯದಿಂದ ಮೂವರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾಗರಗಾ ರಸ್ತೆ ಬಳಿ ನಡೆದಿದೆ. ನಗರದ ಖಾಜಾ ಕಾಲೋನಿ ನಿವಾಸಿ ಫಯಾಜ್ ಶೇಕ್ (24) ಕೊಲೆಯಾದ ಯುವಕ. ಘಟನೆಯಲ್ಲಿ ಇಮ್ರಾನ್ ಹಾಗೂ ಯಾಕೂಬ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೂವರು ಯುವಕರನ್ನು ಕಿಡ್ನ್ಯಾಪ್ ಮಾಡಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ,ಫಯಾಜ್ ಶೇಕ್ ಮೃತಪಟ್ಟಿದ್ದು, ಇನ್ನುಳಿದ ಇಬ್ಬರು ಯುವಕರು ಗಾಯಗೊಂಡಿದ್ದಾರೆ.
ಕೃತ್ಯವನ್ನು ರೌಡಿ ಅಬು ಮೌಲಾನ್ ಬ್ರದರ್ಸ್ ಎಸಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಅಬು ಮೌಲಾನ್ ಸೇರಿ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಮೃತನ ಸಂಬಂಧಿಕರು ಆಗ್ರಹಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.