ಕಲಬುರಗಿ ಶಿಕ್ಷಣ ಫಲಿತಾಂಶ ಸುಧಾರಣೆಗೆ ತಜ್ಞರ ಸಮಿತಿಯಿಂದ 3 ತಿಂಗಳಲ್ಲಿ ವರದಿ: ಡಾ.ಅಜಯ್ ಸಿಂಗ್

0
380

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮಂಡಳಿ ಪಣ ತೊಟ್ಟಿದ್ದು, ಬರುವಂತಹ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಅಗ್ರ 10ರಲ್ಲಿ ಈ ಭಾಗದ ಜಿಲ್ಲೆ ಕಾಣುವಂತೆ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಶುಕ್ರವಾರ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಸುಧಾರಣೆ ಸಂಬಂಧ ಈಗಾಗಲೆ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರಾಗಿ ಅಜೀಂ ಪ್ರೇಮಜಿ ಫೌಂಡೆಷನ್ ಸಂಸ್ಥೆಯ ಡಾ. ರುದ್ರೇಶ, ಡಾ. ಹಿರೇಮಠ ಸ್ವಾಮೀಜಿಗಳು, ಬಳ್ಳಾರಿಯ ಫಾದರ್ ಫ್ರಾಂಸಿಸ್ ಹಾಗೂ ಬೀದರಿನ ಶಾಹಿನ್ ಖದೀರ ಇದ್ದು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಎನ್.ಬಿ ಪಾಟೀಲ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಂದು ಸಮಿತಿ ಸುಮಾರು 3 ಗಂಟೆ ಸುದೀರ್ಘವಾಗಿ ಚರ್ಚೆ ನಡೆಸಿದೆ ಎಂದರು.

Contact Your\'s Advertisement; 9902492681

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಆಡಳಿತಾತ್ಮಕ ಸುಧಾರಣೆ ನಿಟ್ಟಿನಲ್ಲಿ ಸಮಿತಿ ಕಲಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಮೂರು ತಿಂಗಳಲ್ಲಿ ವರದಿ ನೀಡಲು ಸೂಚಿಸಿದ್ದು, ವರದಿ ಬಂದ ನಂತರ ಶಾಲಾ ಶಿಕ್ಷಣ ಇಲಾಖೆ ಜೊತೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಪ್ರಥಮ್ ಫೌಂಡೇಶನ್ ಸಲ್ಲಿಸುವಂತಹ ಎ.ಎಸ್.ಇ.ಆರ್ ವರದಿ ಪ್ರಕಾರ ಕಲಬುರಗಿ ವಿಭಾಗದಲ್ಲಿ 5ನೇ ತರಗತಿಯ ಶೇ.10.9 ಮಕ್ಕಳು ಮತ್ತು 8ನೇ ತರಗತಿಯ ಶೇ.31.2 ಮಕ್ಕಳು ಮಾತ್ರ ಎರಡನೇ ತರಗತಿಯ ಪಠ್ಯವನ್ನು ಓದುವ ಸಾಮರ್ಥ್ಯ ಹೊಂದಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳ ಶಾಲಾ ದಾಖಲಾತಿ ಪ್ರಮಾಣ ಗಮನಿಸಿದಾಗ ಪ್ರಾಥಮಿಕ ವಿಭಾಗದಲ್ಲಿ ರಾಜ್ಯದ ಸರಾಸರಿ ಶೇ.93.25ರಷ್ಟಿದ್ದರೆ ಪ್ರೌಢ ವಿಭಾಗದಲ್ಲಿ ಶೇ.84.41 ಇದೆ. ಇನ್ನು ಕಲಬುರಗಿ ವಿಭಾಗದಲ್ಲಿ ಕ್ರಮವಾಗಿ ಶೇ.92.07 ಮತ್ತು ಶೇ.80.54 ರಷ್ಟಿದೆ. ಇಂತಹ ಪರಿಸ್ಥಿಯಲ್ಲಿ ದಿನ ಬೆಳಗಾದರೆ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಸಮಯ ತೆಗೆದುಕೊಳ್ಳುತ್ತೆ. ಎಲ್.ಕೆ.ಜಿ.ಯಿಂದಲೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತದೆ ಎಂದರು.

ಇನ್ನು ಪ್ರಸಕ್ತ ವರ್ಷ ಮಂಡಳಿಯಿಂದ ರಾಜ್ಯದಲ್ಲಿ ಮೊದಲನೇ ಬಾರಿಗೆ ಆಯ್ದ 1,008 ಶಾಲೆಗಳಲ್ಲಿ ಎಲ್.ಕೆ.ಜಿ.-ಯು.ಕೆ.ಜಿ ತರಗತಿ ಆರಂಭಿಸಿದ್ದು, ಪಾಲಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸುಮಾರು 40 ಸಾವಿರ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಹಳ್ಳಿ ಮಕ್ಕಳು ಸಹ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬುದು ತಮ್ಮ ಬಯಕೆ ಎಂದರು.

ವಿದ್ಯಾರ್ಥಿಗಳಿಗೆ ಕಲಿಕಾಸರೆ ಪುಸ್ತಕ: ಕಳೆದ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ 10ನೇ ತರಗತಿ ಮಕ್ಕಳಿಗೆ ಮಾತ್ರ ಕಲಿಕಾ ಆಸರೆ ಪುಸ್ತಕ ನೀಡಲಾಗಿತ್ತು. ಈ ಬಾರಿ 8 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಪುಸ್ತಕ ನೀಡಲು ಯೋಚಿಸಿದ್ದು, ಇದಕ್ಕಾಗಿ 7.60 ಕೋಟಿ ರೂ. ಮಂಡಳಿ ವ್ಯಯ ಮಾಡುತ್ತಿದೆ ಎಂದು ಡಾ.ಅಜಯ್ ಸಿಂಗ್ ಮಾಹಿತಿ ನೀಡಿದರು.

ಶಿಕ್ಷಕರ-ಮಕ್ಕಳ ಅನುಪಾತದಲ್ಲಿಯೂ ಕಡಿಮೆ: ಕಲಬುರಗಿ ವಿಭಾಗದ ಶಿಕ್ಷಕರ-ಮಕ್ಕಳ ಅನುಪಾತ ನೋಡುವದಾದರೆ 21.91 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೆ, ಮೈಸೂರು ವಿಭಾಗದಲ್ಲಿ 12.83 ಜನರಿಗೆ ಒಬ್ಬರು ಶಿಕ್ಷಕರಿದ್ದಾರೆ. ಪ್ರೌಢ ವಿಭಾಗದಲ್ಲಿ 22.39 ಮಕ್ಕಳಿಗೆ ಒಬ್ಬರು ಶಿಕ್ಷಕರು ಬೋಧಿಸುತ್ತಿದ್ದರೆ ಅದೇ ಮೈಸೂರು ವಿಭಾಗದಲ್ಲಿ 14.46 ಮಕ್ಕಳಿಗೆ ತಲಾ ಒಬ್ಬ ಶಿಕ್ಷಕ ಪಾಠ ಮಾಡುತ್ತಿದ್ದಾನೆ. ಹೀಗಾಗಿ ಶಿಕ್ಷಕರ ಸಮಸ್ಯೆಯೂ ದೊಡ್ಡದಾಗಿದೆ. ಈ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕಳೆದ ವರ್ಷ ಆಕ್ಷರ ಆವಿಸ್ಕಾರ ಯೋಜನೆಯಡಿ ಮಂಡಳಿಯಿಂದಲೆ 2,618 ಅತಿಥಿ ಶಿಕ್ಷಕರನ್ನು ನೇಮಿಸಿ ವೇತನ ಪಾವತಿ ಮಾಡಲಾಗಿದ್ದು, ಈ ವರ್ಷ ಸಹ ಯೋಜನೆ ಮುಂದುವರೆಸಲಾಗಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದರು.

ಮಕ್ಕಳನ್ನು ಶಿಕ್ಷಕರು ದತ್ತು ಪಡೆಯುವಂತಾಗಲಿ: ಶಿಕ್ಷಣ ತಜ್ಞರ ಸಮಿತಿ ಅಧ್ಯಕ್ಷ ಡಾ. ಗುರುರಾಜ ಕರಜಗಿ ಮಾತನಾಡಿ, 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಕಾರಣವಾದ ಪುಣ್ಯಭೂಮಿ ಇದು. ದಾಸರು, ವಚನಕಾರರನ್ನು ಜನ್ಮ ನೀಡಿದ ನೆಲದಲ್ಲಿ ಹಿಂದುಳಿದಿದ್ದೇವೆ ಎಂಬ ಕೀಳರಿಮೆ ನಮ್ಮ ಮಕ್ಕಳಲ್ಲಿ ಮೊದಲ ಹೋಗಲಾಡಿಸಬೇಕಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ವಿಶೇಷವಾಗಿ ಶಿಕ್ಷಕರು ಮಕ್ಕಳ ಶಿಕ್ಷಣ ಬಗ್ಗೆ ಹೆಚ್ಚಿನ ಗಮನಹರಿಸುವುದು ಅನಿವಾರ್ಯವಾಗಿದೆ. ಪ್ರತಿ ಶಿಕ್ಷಕರು ತಲಾ 10 ಮಕ್ಕಳನ್ನು ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ದತ್ತು ಪಡೆದು ಅವರ ಸಂಪೂರ್ಣ ಅಭ್ಯಾಸದ ಮೇಲೆ ಉಸ್ತುವಾರಿ ವಹಿಸಿದಲ್ಲಿ ಫಲಿತಾಂಶ ಸುಧಾರಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಮತ್ತು ಮುಂದಿನ ದಿನದಲ್ಲಿ ಸಮಗ್ರ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಎರಡು ಹಂತದ ವರದಿ ಸಮಿತಿ ನೀಡಲಿದೆ. ದೂರದೃಷ್ಠಿ ಯೋಜನೆಯಡಿ ಪಠ್ಯಕ್ರಮ, ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಆಡಳಿತಾತ್ಮಕ ಸುಧಾರಣೆ ಅಂಶಗಳನ್ನು ಒಳಗೊಳ್ಳಲಿದೆ. ಒಟ್ಟಾರೆಯಾಗಿ ಮೂರು ತಿಂಗಳಲ್ಲಿ ಸಮಗ್ರವಾಗಿ ಅಧ್ಯಯನ ಮಾಡಿ ಮಂಡಳಿಗೆ ವರದಿ ಸಲ್ಲಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಎಸ್. ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here