ಕಲಬುರಗಿ : ಮೌಢ್ಯತೆ, ಅಂಧಕಾರ ಮತ್ತು ತಾರತಮ್ಯಗಳಿಂದ ಕೂಡಿದ ಸಮಾಜವನ್ನು ಸಮಾನತಾ ಸಮಾಜವನ್ನಾಗಿ ನಿರ್ಮಾಣ ಮಾಡುವುದು ಬಸವಾದಿ ಶರಣರ ಆಶಯವಾಗಿತ್ತು ಎಂದು ಕೃಷಿ ಪ್ರಶಸ್ತಿ ಪುರಸ್ಕೃತ ಸಂಸ್ಕೃತಿ ಚಿಂತಕ ಪ್ರೊ. ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.
ಕಮಲಾಪುರ ತಾಲೂಕಿನ ಕುರಕೋಟಾ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ವತಿಯಿಂದ ಆಯೋಜಿಸಿದ್ದ ಅನುಭಾವ ಸಂಗಮದ 13 ನೇ ಮಾಲಿಕೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವಿಶ್ವದ ಚರಿತ್ರೆಯಲ್ಲಿ ನುಡಿದಂತೆ ನಡೆದು, ಸಾರ್ಥಕ ಬದುಕನ್ನು ಬಾಳಿ ಬದುಕಿದವರು ಬಸವಾದಿ ಪ್ರಮಥರು. ಅವರು ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸನ್ಮಾರ್ಗ ತೋರಿದ್ದಾರೆ ಎಂದರು.
ವಚನ ಸಾಹಿತ್ಯವನ್ನು ಇಂದಿನ ಯುವಕರು ಮನೆ-ಮನೆಗಳಿಗೆ ಮನ ಮನಗಳಿಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸಬೇಕೆಂದು ಪ್ರೊ ಅಷ್ಠಗಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ತಾಪುರ ತಾಲೂಕಿನ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರಚಂದ್ರ ವಿದ್ಯಾಸಾಗರ ಮಾತನಾಡಿ,
ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭು, ಚೆನ್ನಬಸವಣ್ಣ , ಸಿದ್ದರಾಮ ಅಕ್ಕಮಹಾದೇವಿ ಸೇರಿದಂತೆ ಅಪಾರ ಸಂಖ್ಯೆಯ ಶರಣರು ಸಮಾಜದ ಬದಲಾವಣೆಗೆ ಕೊಡುಗೆ ನೀಡಿದ್ದಾರೆ.
ತಮ್ಮ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಉತ್ತಮ ಸಂದೇಶವನ್ನು ಸಾರಿ ಸಮಾಜ ಪರಿವರ್ತನೆಗೆ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಸಂಗಮೇಶ್ವರ ಸ್ವಾಮಿ ಮಾತನಾಡಿದರು. ಶ್ರೀ ಶಿವಲಿಂಗೇಶ್ವರ ಮಠ – ಶಿವಯೋಗಾಶ್ರಮ ಕಾಳೇನಹಳ್ಳಿ, ಶಿಕಾರಿಪುರದ ಪೂಜ್ಯ ಡಾ ಸಿದ್ದಲಿಂಗ ಮಹಾಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆನಲೈನ್ ಮೂಲಕ ಆಶಿರ್ವಚನ ನೀಡಿದರು.
ಈ ವೇಳೆ ಗ್ರಾಮದ ಹಿರಿಯರಾದ ಸಂಗಣ್ಣ ಚಿಲಶೆಟ್ಟಿ, ಬಸವರಾಜ್ ಕಲ್ಯಾಣ, ರಮೇಶ್ ಸಾಹು, ಶಿವಲಿಂಗಯ್ಯ ಮಠಪತಿ, ಶಾಂತಲಿಂಗ ಚಿಲಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಶರಣಬಸವ ವಚನ ಪ್ರಾರ್ಥನೆ ಮಾಡಿದರು. ಸುರ್ಯಕಾಂತ ದೋಣಿ ಸ್ವಾಗತಿಸಿದರು. ಸಾಹಿತಿ ಅಂಬಾರಾಯ ಮಡ್ಡೆ ನಿರೂಪಿಸಿದರು. ಚನ್ನವೀರ ಸ್ವಾಮಿ ವಂದಿಸಿದರು.