ಕಲಬುರಗಿ: ಇಲ್ಲಿನ ಹಳೆ ಜೇವರ್ಗಿ ರಸ್ತೆಯ ಪಿ ಆ್ಯಂಡ್ ಟಿ ವಸತಿಗೃಹ ಸಮೀಪದಲ್ಲಿರುವ ಎಂಎಸ್‍ಡಬ್ಲ್ಯೂ ಸ್ನಾತಕೋತ್ತರ ಕೇಂದ್ರ, ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಅರ್ಪಿಸಲಾಯಿತು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಶರಣು ಹೊನ್ನಗೆಜ್ಜಿ ಮಾತನಾಡಿ, ನವೆಂಬರ ಒಂದರ ಕನ್ನಡಿಗರಾಗಿರದೆ ನಿತ್ಯ ಕನ್ನಡಿಗರಾಗಿರೋಣ. ಕನ್ನಡ ನಾಡು, ನುಡಿ, ಜಲ, ನೆಲ ಸಂರಕ್ಷಣೆಯೊಂದಿಗೆ ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಯಾವಾಗಲು ಸಿದ್ಧರಾಗಿರಬೇಕು ಎಂದು ತಿಳಿಹೇಳಿದರು.
ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ.ಎಸ್. ಹೊನಗೆಜ್ಜೆ ಮಾತನಾಡಿ, ಮಾತೃಭಾಷೆ ಕನ್ನಡದಲ್ಲಿ ಬ್ಯಾಂಕಿಂಗ್, ಅಂಚೆ ಕಚೇರಿ, ರೈಲ್ವೆ, ವಿಮಾನಸೇವೆ ಹೀಗೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಈ ದಿಸೆಯಲ್ಲಿ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರು ಕಂಕಣಬದ್ಧರಾಗಿ ಕೆಲಸ ನಿರ್ವಹಿಸೋಣ ಎಂದರು. ಕಲಿತವರಿಗೆ ಅಮೃತ, ನೆನದವರಿಗೆ ನೆರಳು, ಅಂಧರಿಗೆ ದಾರಿದೀಪ, ಅಪ್ಪಿಕೋ ಕನ್ನಡವ ಬಗ್ಗೆ ಜಾಗೃತಿ ಮೂಡಿಸಿ, ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದು ಬಣ್ಣಿಸಿದರು.
ಕಾಲೇಜಿನ ಉಪನ್ಯಾಸಕರಾದ ರಾಹುಲ್ ಶೇರಿಕಾರ್, ಜಗನ್ನಾಥ ಪುಲ್ಲಾ, ನಾಗೇಶ.ಕೆ.ಎಸ್. ಪ್ರೀತಿ ಸಜ್ಜನ, ರಾಜೇಶ್ವರಿ ಮಲಕೂಡ, ವಿಜಯಲಕ್ಷ್ಮೀ.ಎಸ್, ಸುಜಾತಾ ದೇವನೂರಕರ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.