ಚಂದ್ರಶೇಖರ ಪಾಟೀಲ್ ಸ್ಟೇಡಿಯಂನಲ್ಲಿ ಕ್ರೀಡಾಸಕ್ತರಿಗೆ ಉಚಿತ ತರಬೇತಿ: ಸುಬೋಧ್ ಯಾದವ್

0
88

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡೆಗಳಿಗೆ ಸಂಬಂಧಪಟ್ಟ ಮಾರ್ಗದರ್ಶಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಮಕ್ಕಳು ಯುವಕರು, ವೃದ್ಧರು, ಕ್ರೀಡಾ ಆಸಕ್ತರು ಮಾರ್ಗದರ್ಶಕರಿಂದ ಉಚಿತ ತರಬೇತಿ ಪಡೆದುಕೊಳ್ಳಬಹುದೆಂದು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ಹೇಳಿದರು.

ಶುಕ್ರವಾರ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಈಜುಕೊಳ, ಮಹಿಳಾ ಹಾಗೂ ಪುರುಷರ ಜಿಮ್, ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಕ್ರೀಡಾಪಟುಗಳಿಗೆ ತರಬೇತಿ ನೀಡಲು ೫ ಜನರ ನುರಿತು ತರಬೇತಿದಾರರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಕ್ರೀಡಾ ಸಾಮಗ್ರಿಗಳ ಬಳಕೆಗೆ ಪ್ರತಿ ತಿಂಗಳು ೧೦೦೦ ರೂ.ಗಳ ಪಾವತಿಸುವ ಮೂಲಕ ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು. ಕ್ರೀಡಾಪಟುಗಳು ಸೇರಿದಂತೆ ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ೯ ಗಂಟೆಯವರೆಗೆ ಹಾಗೂ ಸಾಯಂಕಾಲ ೪ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ಕರೆ ನೀಡಿದರು.

ಜಿಲ್ಲೆಯಲ್ಲಿರುವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಕಡ್ಡಾಯವಾಗಿ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡೆಗಳ ಬಗ್ಗೆ ಮಾಹಿತಿ ತಲುಪಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಪ್ರತಿಯೊಬ್ಬರಿಗೂ ಮಾಹಿತಿ ಮುಟ್ಟಿಸುವುದರಿಂದ ಸಾರ್ವಜನಿಕರು ಇದರ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಈಗಾಗಲೇ ಹಾಕಿ ಗ್ರೌಂಡ್, ಕ್ರಿಕೆಟ್, ಬೇಬಿ ಪೂಲ್ ತರಬೇತಿಗಳು ಪ್ರಾರಂಭವಾಗಿವೆ. ಆದರೆ, ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಮಾಹಿತಿನೇ ಇಲ್ಲದೇ ಸಾರ್ವಜನಿಕರು ಬರುವುದಾದರೂ ಹೇಗೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈಗಾಗಲೇ ಬೇಸಿಗೆ ಕಾಲದ ರಜೆ ಹಾಗೂ ದಸರಾ ಹಬ್ಬದ ರಜೆಗಳು ಮುಗಿದು ಹೋಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳನ್ನು ಸೆಳೆಯುವಂತಹ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲಿ ರೂಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕ್ರೀಡಾ ಸಾಮಗ್ರಿಗಳು ಷರತ್ತುಗಳನ್ವಯ ತರಬೇತಿದಾರರಿಗೆ ನೀಡುವುದರಿಂದ ಸಾಮಾನುಗಳ ಬಳಕೆಯಾಗುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಈಜುಕೊಳದಿಂದ ಲಾನ್‌ಟೆನ್ನಿಸ್ ಅಂಕಣದವರೆಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಇನ್ನುಳಿದ ಭಾಗಗಳಲ್ಲೂ ಕೂಡಲೇ ಸಿಸಿಟಿವಿ ಅಳವಡಿಸಿಕೊಳ್ಳುವುದರ ಜೊತೆಗೆ ಹೋಂ ಗಾರ್ಡ್ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತೆ ಜಿಲ್ಲಾ ಕ್ರೀಡಾಂಗಣದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸುಬೋಧ್ ಯಾದವ್ ಅವರು ಸೂಚಿಸಿದರು.

ಕಳೆದ ೬ ತಿಂಗಳಿಂದ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಎಷ್ಟು ಸಾರ್ವಜನಿಕರು ಕ್ರೀಡಾಂಗಣದ ಉಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ಎಷ್ಟು ಆದಾಯ ಮತ್ತು ಖರ್ಚು ಎಷ್ಟು ಬಂದಿದೆ ಎಂಬುವುದರ ಖಚಿತ ಮಾಹಿತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಭೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here