ವಿಜಯನಗರ (ಹೊಸಪೇಟೆ):ಪ್ರಸಕ್ತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಅಜಯ್ ಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಕೆಅರ್ ಡಿಬಿಗೆ ಸುಮಾರು 5000 ಕೋಟಿ ರೂಗಳ ಅನುದಾನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ವಿಜಯನಗರ ಜಿಲ್ಲೆಗೆ ಈ ವರ್ಷ ಮೈಕ್ರೋ ಯೋಜನೆಯಡಿ ರೂ.226 ಕೋಟಿ ಹಾಗೂ ಮ್ಯಾಕ್ರೋ ಯೋಜನೆಯಡಿ ರೂ.122 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
ಕೆಕೆಆರ್ ಡಿಬಿ ಬಿಡುಗಡೆಯಾದ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆ, ಅದೇ ಯೋಜನೆಗಾಗಿ ವಿನಿಯೋಗವಾಗಬೇಕು. ಆದರೆ ಬೇರೆ ಕಾಮಗಾರಿಗಳಿಗೆ ವರ್ಗಾಯಿಸಿದರೇ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಖಚಿತ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು. ಆದರೆ ಕೆಲವು ಅನುಷ್ಟಾನ ಇಲಾಖೆಯವರು ನಿಗಧಿತ ಅವಧಿಯಲ್ಲಿ ಅನುದಾನ ಸದ್ಭಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ 38 ಕೋಟಿ ರೂ, ಹೂವಿನಹಡಗಲಿಗೆ 46 ಕೋಟಿ ರೂ, ಹೊಸಪೇಟೆಗೆ 12 ಕೋಟಿರೂ, ಕೂಡ್ಲಿಗಿಗೆ 62 ಕೋಟಿ,ಹರಪನಹಳ್ಳಿಗೆ 67 ಕೋಟಿ ರೂಗಳು ಅನುದಾನನೀಡಲಾಗಿದೆ.ಮುಂದಿನ ಮೂರು ವರ್ಷದಲ್ಲಿ ಸುಮಾರು 11 ಸಾವಿರ ಕೋಟಿ ರೂ ಅನುದಾನ ತರುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುನ್ನುಡಿ ಹಾಕಿದ್ದೇವೆ. ಇದರಲ್ಲಿ ಗುಣಮಟ್ಟದಶಿಕ್ಷಣ,ಈ ಭಾಗದ ಸರ್ವ ಜನರ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ದಿ ಮಾಡಲು ಅನುದಾನ ನೀಡಿ, ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ವಿಜಯನಗರ ಜಿಲ್ಲೆ ಹಿಂದಿನ ಭಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 27 ನೇ ಸ್ಥಾನ ಪಡೆದಿತ್ತು. ಈ ಬಾರಿ ಯಾವುದೇ ಕಾರಣ ಹೇಳದೇ ಉತ್ತಮ ಫಲಿತಾಂಶ ನೀಡಬೇಕಿದೆ ಎಂದರು.
ಈ ವೇಳೆ ಕೆಕೆಆರ್ ಡಿಬಿ ಮಂಡಳಿ ಕಾರ್ಯದರ್ಶಿ ಸುಂದರೇಶ್ ಬಾಬು ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿಗಳನ್ನು ಅವಲೋಕಿಸಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಅನುದಾನ ಸದ್ಭಳಕೆಯಲ್ಲಿ ಹಿಂದುಳಿದರೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಹೊಸಪೇಟೆ ಶಾಸಕರಾದ ಹೆಚ್.ಆರ್.ಗವಿಯಪ್ಪ, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಓ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಇದ್ದರು.