ಬಿ.ಸಿ.ಎಂ. ಮಹಿಳಾ ವಸತಿ ನಿಲಯಕ್ಕೆ ಉಪ ಲೋಕಾಯುಕ್ತರ ದಿಢೀರ್ ಭೇಟಿ

0
21

ಕಲಬುರಗಿ:  ಪ್ರವಾಸದಲ್ಲಿರುವ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಶುಕ್ರವಾರ ದಿನವಿಡೀ ಸಾರ್ವಜನಿಕರ ಅಹವಾಲು ಸ್ಚೀಕರಿಸಿದದ ನಂತರ ರಾತ್ರಿ 9 ಗಂಟೆ ಸುಮಾರಿಗೆ ಕಲಬುರಗಿ‌ ನಗರದ ಐವಾನ್-ಎ-ಶಾಹಿ ಪ್ರದೇಶದ ಬಿ.ಸಿ.ಎಂ. ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು.

ವಸತಿ ನಿಲಯದಲ್ಲಿ ಫ್ಯಾನ್, ಲೈಟ್ ಇಲ್ಲ, ಕಟ್ಟಡ ಹಳೆದಾಗಿರುವುದರಿಂದ ದುರಸ್ತಿ ಮಾಡಿಸಬೇಕಿದೆ. ಉಲಿದಂತೆ ಯಾವುದೆ ಸಮಸ್ಯೆ ಇಲ್ಲ. ವಾರ್ಡನ್ ಮೇಡಂ ಸರಿಯಾಗಿ ನೋಡಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿಯರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಕೂಡಲೆ ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿ. ದುರಸ್ತಿಗಳಿದ್ದರೆ ಸರಿಪಡಿಸಿ. ಜೆಸ್ಕಾಂನಿಂದ‌ ವಿದ್ಯುತ್ ರಿಪೇರಿ ಮಾಡಿಸಬೇಕು ಎಂದು ವಾರ್ಡನ್ ಮಂದಾಕಿನಿ ಅವರಿಗೆ ಬಿ.ವೀರಪ್ಪ ಸೂಚಿಸಿದರು.

Contact Your\'s Advertisement; 9902492681

ವಸತಿ ನಿಲಯದಲ್ಲಿ ಗ್ರಂಥಾಲಯದಲ್ಲಿ ಇಲ್ಲದಿರುವುದು ವ್ಯಾಸಂಗಕ್ಕೆ ತೊಂದರೆಯಾಗುತ್ತಿದ್ದು, ಗ್ರಂಥಾಲಯ ಆರಂಭಿಸಿಬೇಕು ಎಂಬ ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿದ ನ್ಯಾ. ಬಿ.ವೀರಪ್ಪ ಎರಡು ತಿಂಗಳಲ್ಲಿ ಗ್ರಂಥಾಲಯ ಆರಂಭಿಸುವಂತೆ ಬಿ.ಸಿ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ಸರಿಯಾಗಿ ನೋಡಿಕೊಳ್ಳಿ ಎಂದು ವಾರ್ಡನ್ ಗೆ ಸಲಹೆ ನೀಡಿದರು.

*ಎಲ್ಲೆ ಇರಿ ಎಂದೆಂದಿಗೂ ಭ್ರಷ್ಟಾಚಾರಿಯಾಗದಿರಿ:*

ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ‌ ನ್ಯಾ. ಬಿ. ವೀರಪ್ಪ ಅವರು, ನಿಮ್ಮ ತಂದೆ-ತಾಯಿ ಕಷ್ಟಪಟ್ಟು ನಿಮಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬೇಡಿ. ಹೆತ್ತವರನ್ನು ಗೌರವಿಸಿ ಎಂದು ಬುದ್ದಿ ಮಾತು ಹೇಳಿದ ಅವರು ಮುಂದೆ ದೊಡ್ಡವರಾಗಿ ಅಧಿಕಾರಿಗಳಾದ ಮೇಲೆ ಯಾವುದೇ ಕಾರಣಕ್ಕೂ ಲಂಚಕ್ಕೆ ಕೈ ಚಾಚಬೇಡಿ‌. ಎಲ್ಲೆ ಇರಿ, ಎಂತಾದರು ಇರು, ಎಂದೆಂದಿಗೂ ಭ್ರಷ್ಟಾಚಾರಿಯಾಗದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಜೀವನದಲ್ಲಿ ಸಾಧನೆಯೆ ಕೆಚ್ಚೆದೆಯ ಹೋರಾಟ, ಛಲ ಅವಶ್ಯಕವಾಗಿದ್ದು ಅದನ್ನು ರೂಢಿಸಿಕೊಳ್ಳಿ ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.

ನಂತರ ಚಂಪಾ‌ ಕ್ರೀಡಾಂಗಣದ ಎದುರುಗಡೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪಾಲಿಟೆಕ್ನಿಕ್ ವಸತಿ ಗೃಹಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ನಿಲಯದ ಹೊರಗಡೆ ಲೈಟ್ ಹಾಕದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೆ ಲೈಟ್ ಹಾಕಿಸಿ, ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ವಾರ್ಡನ್ ತುಕಾರಾಮ ಚವ್ಹಾಣ ಅವರಿಗೆ ಸೂಚಿಸಿದರು.

ವಿದ್ಯಾರ್ಥಿಗಳಿರುವ ಕೊಠಡಿಗೆ ಪ್ರವೇಶಿಸಿದ ಅವರು ವ್ಯಾಸಂಗ‌ ಮಾಡುತ್ತಿರುವ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಚೆನ್ನಾಗಿ ಓದಿ, ಭ್ರಷ್ಟಾಚಾರಕ್ಕೆ ಸಹಕರಿಸಬೇಡಿ. ರಾಷ್ಟ್ರವೇ ಹೆಮ್ಮೆ ಪಡುವಂತೆ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಬುದ್ದಿವಾದ ಮಾತು ಹೇಳಿ ಅವರೊಂದಿಗೆ ಗ್ರೂಪ್ ಫೋಟೊಗೆ ಅಧಿಕಾರಿಗಳೊಂದಿಗೆ ಫೋಸ್ ನೀಡಿದರು‌.

*ನಮಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಿ:*

ಉಪ ಲೋಕಾಯುಕ್ತರು ಸರ್ಕಾರಿ ಪಾಲಿಟೆಕ್ನಿಕ್ ವಸತಿ ಗೃಹಕ್ಕೆ ಭೇಟಿ ನೀಡಿರುವ ವಿಷಯ ಅರಿತ ಪಕ್ಕದ ಬಿ.ಎಡ್. ಕಾಲೇಜಿನ ಪುರುಷ ವಿದ್ಯಾರ್ಥಿಗಳು ಆಗಮಿಸಿ ತಾವು 80-85ಕ್ಕಿಂತ ಹೆಚ್ಚಿನ ಅಂಕ ಪಡೆದು ಆನ್ ಲೈನ್ ಮೂಲಕ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿದರು ತಮಗೆ ಬಿ.ಸಿ.ಎಂ ಹಾಸ್ಟೆಲ್‌ ಸಿಕ್ಕಿಲ್ಲ ಎಂದು ಹೇಳಿಕೊಂಡರು.

ಯಾವುದೇ ನಿರ್ವಹಣೆ ಇಲ್ಲದ ಕಾಲೇಜಿನ ಹಳೇ ಹಾಸ್ಟೆಲ್ ನಲ್ಲಿದ್ದು, ವಿದ್ಯಾಭ್ಯಾಸ ಮುಂದುವರೆಸಿದ್ದೇವೆ. ಇಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಎಲ್ಲರು ಸ್ವಂತ ಹಣ ಶೇರ್ ಮಾಡಿಕೊಂಡು ಲೈಟ್, ಫ್ಯಾನ್ ದುರಸ್ತಿ ಮಾಡಿಕೊಂಡಿದ್ದೇವೆ. ದಯವಿಟ್ಟು ನಮಗೆ ಬಿ.ಸಿ.ಎಂ ಇಲಾಖೆಯ ಇತರೆ ಯಾವುದಾದರು ಹತ್ತಿರದ ವಸತಿ ನಿಲಯಕ್ಕೆ ಅವಕಾಶ ಕಲ್ಪಿಸಿ ಎಂದು ಮಹೇಶ, ಶಿವಕುಮಾರ ಸೇರಿ ಹತ್ತಾರು ವಿದ್ಯಾರ್ಥಿಗಳು ಉಪ ಲೋಕಾಯುಕ್ತರಲ್ಲಿ ತಮ್ಮ ಅಳಲು ತೋಡಿಕೊಂಡರು.

ವಿದ್ಯಾರ್ಥಿಗಳ ಸಮಸ್ಯೆ ಅರಿತ ನ್ಯಾ. ಬಿ.ವೀರಪ್ಪ ಅವರು ಬಿ.ಎಡ್. ವಿದ್ಯಾರ್ಥಿಗಳು ಬಿ‌ಸಿ.ಎಂ. ವರ್ಗಕ್ಕೆ ಸೇರಿದ ಕಾರಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಲು ಪರಿಗಣಿಸುವಂತೆ ಬಿ‌.ಸಿ‌.ಎಂ ಅಧಿಕಾರಿ ಪ್ರಭು ದೊರೆ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here