ಕಲಬುರಗಿ: ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಾಂಗ್ರೆಸ್ ಸರಕಾರವು ಜನತೆಗೆ ಗ್ಯಾರಂಟಿಗಳ ಆಸೆ ತೋರಿಸಿ ಗೆದ್ದ ನಂತರ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.ಜನರನ್ನು ಉದ್ದಾರ ಮಾಡೋದು ಬಿಟ್ಟು ಹಗರಣದಲ್ಲಿ ಮುಳುಗಿ ಹೋಗಿದೆ. ತಮ್ಮ ಅಧಿಕಾರದ ಆಸೆಗೆ ರಾಜ್ಯದ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ, ಭ್ರμÁ್ಟಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ಅನಾವಶ್ಯಕವಾಗಿ ವೈಜ್ಞಾನಿಕ ಮಾನದಂಡ ಅನುಸರಿಸದೇ ರದ್ದು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ನವರು, ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಕ್ರಮದ ತಂತ್ರ-ಕುತಂತ್ರಗಳು ದೇಶದ ಮುಂದೆ ತಮ್ಮ ನಾಟಕವನ್ನು ಬಯಲು ಮಾಡಿವೆ. ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ಖಂಡಿಸುತ್ತದೆ.
ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ದಾರರನ್ನು ಇಳಿಮುಖಗೊಳಿಸಿ ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡು ದಾರರ ರದ್ದತಿಯ ಹಿಂದೆ ಅಡಗಿದೆ ಎಂಬುದು ರಾಜ್ಯ ಸರಕಾರದ ನೀತಿ ನಿಲುವುಗಳಿಂದ ತಿಳಿಯುತ್ತಿದೆ.
ಬಿಪಿಎಲ್ ಕಾರ್ಡು ರದ್ದು ಮಾಡಲು ಹಲವಾರು ದಾರಿ ಹುಡುಕುತ್ತಿರುವ ರಾಜ್ಯ ಸರಕಾರ ಸಣ್ಣ ರೈತರು ಸಹ ಮನೆ ನಿರ್ಮಾಣಕ್ಕೆ ಅಥವಾ ಹೈನುಗಾರಿಕೆಗೆ ಬ್ಯಾಂಕ್ ಅಲ್ಲಿ ಸಾಲ ಸೌಲಭ್ಯ ಪಡೆಯಲು ತೆರಳಿದಾಗ ಬ್ಯಾಂಕ್ ಅಧಿಕಾರಿಗಳು ನೀವು ಅಂದಾಜು ಮೂರು ವರ್ಷಗಳ ತೆರಿಗೆ ಸಂಗ್ರಹ ಮಾಡಿರಬೇಕು ಎಂದು ಹೇಳಿರುತ್ತಾರೆ. ಅದರಂತೆ ಮುಗ್ಧ ಜನರು ಸಾಲ ಪಡೆಯವ ಉದ್ದೇಶದಿಂದ ತೆರಿಗೆಯನ್ನು ಕಟ್ಟಿರುತ್ತಾರೆ ಎಂದು ತಿಳಿಸಿದರು.