ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು ತಮ್ಮ ಕಲೆಯ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.
ನಗರದ ಜೆ.ಆರ್.ನಗರದ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಸಂಜೆ ಏರ್ಪಡಿಸಿದ್ದ “ಸಂಗೀತ ಕಲಾ ಸಂಭ್ರಮ- ಕಲಾವಿದರು, ಸಮಾಜ ಸೇವಕರಿಗೆ ಗೌರವ, ಸಾಂಸ್ಕೃತಿಕ ಕಾರ್ಯಕ್ರಮಗಳು” ಉದ್ಘಾಟಿಸಿ ಮಾತನಾಡಿದರು. ಸಂಗೀತ ಕ್ಷೇತ್ರಕ್ಕೆ ಹಾನಗಲ ಶ್ರೀಗಳು, ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ. ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕ ಎಚ್.ಬಿ.ಪಾಟೀಲ, ಆಳಂದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಕಲೆ ಮತ್ತು ಕಲಾವಿದರಿಗೆ ಗೌರವ ನೀಡಿ, ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಮಾತ್ರ ಕಲೆ ಜೀವಂತಿಕೆಯಿಂದ ಇರಲು ಸಾಧ್ಯವಿದೆ. ಅಶಾಂತಿಗೆ ಸಂಗೀತ ಮದ್ದಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.
ಸಂಗೀತ ಕಲಾವಿದರಾದ ಹಣಮಂತರಾಯ ಮಂಗಾಣೆ, ತುಕಾರಾಮ ಸಿಂಗೆ, ಪ್ರಶಾಂತ ವಸ್ತ್ರದಮಠ, ಶ್ರೀನಿವಾಸ ಕಾಡಾದಿ, ದೇವನಾಥ ಮಾಳಗೆ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಿಸರ್ಗ ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಿಆರ್ ಪಿಎಫ್ ಯೋಧ ಸಂಜೀವಕುಮಾರ ಬಾಣೇಕಾರ್, ಪ್ತಮುಖರಾದ ಶಂಕರ ರಾಜಾಪುರ, ವೀರಶೆಟ್ಟಿ, ಪ್ರಕಾಶ ಕಟ್ಟಿಮನಿ, ಉಮೇಶ್, ಪೀರಪ್ಪ, ಅಮರನಾಥ ಶಿವಮೂರ್ತಿ, ಸಿದ್ದಾರೂಢ ಬಿರಾದಾರ, ಮಹಾದೇವಪ್ಪ ಬಿರಾದಾರ, ರಾಜಶೇಖರ ಮೆಟೆಕಾರ್, ಅಣ್ಣಾರಾಯ ಎಚ್.ಮಂಗಾಣೆ, ಮಲ್ಲಿಕಾರ್ಜುನ ಕಾಖಂಡಕಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.