ಜೇವರ್ಗಿ ಬಿಸಿಎಂ ವಸತಿ ನಿಲಯ ವಿಷಜಂತುಗಳ ರೆಸಾರ್ಟ್: ವಿದ್ಯಾರ್ಥಿಗಳು ಕಂಗಾಲು

0
76

ಕಲಬುರಗಿ: ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜಿಲ್ಲೆಯಲ್ಲಿನ ವಿದ್ಯಾರ್ಥಿ ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಯಾವುದೇ ರೀತಿಯಲ್ಲಿ ಸುಧಾರಣೆ ಆಗಿಲ್ಲ. ಜಿಲ್ಲೆಯ ಜೇವರ್ಗಿ ಪಟ್ಟಣದ ಬಟ್ನಾಳ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯವು ವಿಷಜಂತುಗಳ ರೆಸಾರ್ಟ್ ಆಗಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ವಸತಿ ನಿಲಯದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೇವಲ ೮ ಕೋಣೆಗಳಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬೇಕಾದ ದುಸ್ಥಿತಿ ಬಂದಿದೆ. ಕೇವಲ ನೆಲ ಹಾಸಿಗೆಯ ಮೇಲೆಯೇ ಒಂದು ಕೋಣೆಯಲ್ಲಿ ಹತ್ತಕ್ಕಿಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಹ ದಯನೀಯ ಸ್ಥಿತಿಯನ್ನು ಇಲಾಖೆಯ ಅಧಿಕಾರಿಗಳು ತಂದಿಟ್ಟಿದ್ದಾರೆ.

Contact Your\'s Advertisement; 9902492681

ಅಡಿಗೆ ಕೋಣೆಯಂತೂ ನಾಯಿಗಳು ಮಲಗುವ ತಾಣವಾಗಿದೆ. ಸ್ವಚ್ಛತೆ ಇಲ್ಲದೇ ಇರುವುದರಿಂದ ಎಲ್ಲಿ ನೋಡಿದರಲ್ಲಿ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿವೆ. ಊಟವಂತೂ ಅತ್ಯಂತ ಕಳಪೆ ಮಟ್ಟದಲ್ಲಿದ್ದು, ವಿದ್ಯಾರ್ಥಿಗಳು ಕಳಪೆ ಊಟ ಮಾಡದೇ ಇರುವುದರಿಂದ ಆ ಊಟ ನಾಯಿಗಳ ಪಾಲಾಗುತ್ತಿದೆ. ಇನ್ನು ಕುಡಿಯುವ ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ. ಕೊಳಚೆ ನೀರನ್ನೇ ಕುಡಿಯುವಂತಹ ಪರಿಸ್ಥಿತಿ ಬಂದಿದೆ. ಶೌಚಾಲಯ ವ್ಯವಸ್ಥೆ ಇಲ್ಲವೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಸ್ನಾನದ ಕೋಣೆ ಒಂದೇ ಇದ್ದು, ಬಹಳಷ್ಟು ವಿದ್ಯಾರ್ಥಿಗಳು ಸ್ನಾನವನ್ನು ರಸ್ತೆಯ ಪಕ್ಕದಲ್ಲಿಯೇ ಅತ್ಯಂತ ಮುಜುಗುರಗೊಂಡು ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿ ಪೂರೈಸಿಲ್ಲ. ಹೀಟರ್ ಕ್ವಾಯಿಲ್ ಕೂಡಿಸಿದ್ದು, ಅದರಿಂದ ಅನೇಕ ವಿದ್ಯಾರ್ಥಿಗಳು ವಿದ್ಯುತ್ ಅಪಘಾತಕ್ಕೆ ಒಳಗಾಗುತ್ತಿದ್ದು, ತಣ್ಣೀರಿನ ಸ್ನಾನವನ್ನೇ ವಿದ್ಯಾರ್ಥಿಗಳು ಮಾಡುವಂತಾಗಿದೆ. ಇನ್ನು ಹಾಸಿಗೆ, ಹೊದಿಕೆಗಳು, ದಿಂಬುಗಳು, ಮಂಚಗಳನ್ನೂ ಸಹ ವಿದ್ಯಾರ್ಥಿಗಳೂ ಕಂಡಿಲ್ಲ. ಗ್ರಂಥಾಲಯ ಹಾಗೂ ಕಂಪ್ಯೂಟರ್ ಸೌಲಭ್ಯ ಇದ್ದರೂ ಸಹ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಅದರಿಂದ ಯಾವುದೇ ರೀತಿಯಲ್ಲಿ ಉಪಯೋಗ ಆಗುತ್ತಿಲ್ಲ.
ಆಹಾರ ಕಳಪೆ ಕೊಡುತ್ತಿರುವುದರ ಕುರಿತು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ವಿಸ್ತೀರ್ಣಾಧಿಕಾರಿ ಹಿರೇಗೌಡ ಅವರಿಗೆ ಹೇಳಿದರೆ ಅವರು ಸಮಸ್ಯೆಗೆ ಸ್ಪಂದಿಸುವ ಬದಲು ವಿದ್ಯಾರ್ಥಿಗಳಿಗೆ ದಬಾಯಿಸುತ್ತಿದ್ದಾರೆ. ಊರಿನ ಮುಖಂಡನೊಬ್ಬನಿಂದ ಬೆದರಿಕೆ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕಳಪೆ ಊಟವನ್ನು ಮೇಲ್ವಿಚಾರಕನು ಮಾಡಿದರೆ ಆತ ಆಸ್ಪತ್ರೆ ಸೇರುವುದು ಖಚಿತ ಎಂದು ನೊಂದ ವಿದ್ಯಾರ್ಥಿಗಳು ಹೇಳುತ್ತಾರೆ. ಈ ಕುರಿತು ವಸತಿ ನಿಲಯದ ಮೇಲ್ವಿಚಾರಕನಿಗೆ ಕೇಳಿದರೆ ತಾನು ಬಂದು ಕೇವಲ ಒಂದು ತಿಂಗಳು ಆಗಿದೆ ಎಂದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿ ಅರ್ಧ ಅವಧಿ ಪೂರ್ಣಗೊಂಡರೂ ಸಹ ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಸಿಗದೇ ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಿಂದಾಗಿಯೇ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಜಿಲ್ಲೆಯು ಕೊನೆಯ ಸ್ಥಾನದಲ್ಲಿದೆ.

ಕೂಡಲೇ ರಾಜ್ಯದ ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್, ಜಿಲ್ಲಾಧಿಕಾರಿ ಬಿ. ಶರತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಅವರು ಗಮನಹರಿಸಿ ಇಂತಹ ದುಸ್ಥಿತಿಯಲ್ಲಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರೂ ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಸಕ್ತಿ ವಹಿಸಿದ್ದು, ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ನಿವಾರಿಸಲು ಮುಂದಾಗಬೇಕಾಗಿದೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here