ಅಭಿವೃದ್ಧಿ ವಿಷಯಗಳಲ್ಲಿ ಪುಕ್ಕಟೆ ಪ್ರಚಾರ: ಪ್ರಿಯಾಂಕ್ ಖರ್ಗೆಯವರಿಗೆ ಜಾಧವ್ ತಿರುಗೇಟು

0
278

ಕಲಬುರಗಿ: ಅಭಿವೃದ್ಧಿ ವಿಷಯಗಳಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾಜಿ ಸಚಿವ ಹಾಗೂ ಚಿತ್ತಾಪೂರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಇಲ್ಲಿ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆಯ್ಕೆಯಾದಾಗಿನಿಂದ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರವನ್ನು ಕೈಗೊಂಡಿದ್ದೇನೆ. ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಬೆಳಿಗ್ಗೆ ೮-೩೦ರಿಂದಲೇ ನಾನು ಕಾರ್ಯ ಚಟುವಟಿಕೆಗಳನ್ನು ಆರಂಭಿಸುತ್ತೇನೆ. ಇಲ್ಲಿಯವರೆಗೂ ನಾನು ಸಮಯ ಹರಣವನ್ನು ಮಾಡಿಲ್ಲ. ಬದಲಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದರು.

Contact Your\'s Advertisement; 9902492681

ಜಿಮ್ಸ್ ಆಸ್ಪತ್ರೆಯ ಕುರಿತು ಪ್ರಸ್ತಾಪಿಸಿದ ಸಂಸದ ಡಾ. ಜಾಧವ್ ಅವರು, ನಾನು ಜಿಮ್ಸ್ ಆಸ್ಪತ್ರೆಗೆ ಎರಡ್ಮೂರು ಬಾರಿ ಭೇಟಿ ನೀಡಿದ್ದೇನೆ. ಆಸ್ಪತ್ರೆಯಲ್ಲಿನ ಹದಗೆಟ್ಟ ವ್ಯವಸ್ಥೆಯ ಕುರಿತು ಅಲ್ಲಿನ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು, ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇನೆ. ಈಗ ಆಸ್ಪತ್ರೆಯಲ್ಲಿ ಸುಧಾರಣೆ ಕಂಡುಬರುತ್ತಿದೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರನ್ನು ಕರೆದುಕೊಂಡು ಹೋಗಿರಲಿಲ್ಲ. ಮಾಧ್ಯಮದವರು ಬಂದಿರಲಿಲ್ಲ ಎಂದರು. ಜಿಲ್ಲೆಯ ಕಾಂಗ್ರೆಸ್ ಶಾಸಕರ ಅನುದಾನವನ್ನು ಕಡಿತಗೊಳಿಸಿ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕೊಡಲಾಗುತ್ತಿದೆ ಎಂಬ ಪ್ರಿಯಾಂಕ್ ಖರ್ಗೆಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ವಿಷಯ ನನಗೆ ಗೊತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಈ ಹಿಂದೆ ನೆರೆ ಹಾವಳಿ ಬಂದಿತ್ತು. ಈಗ ಮತ್ತೆ ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಹಾವಳಿ ಬಂದಿದೆ. ಸಂತ್ರಸ್ತರ ಪರಿಹಾರಕ್ಕಾಗಿ ಅನುದಾನಗಳನ್ನು ಬಳಕೆ ಮಾಡಿರಬಹುದು ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆದಲ್ಲಿ ಅದನ್ನು ಪಡೆಯುವುದು ಶಾಸಕರ ಹಕ್ಕು. ಅದಕ್ಕಾಗಿ ಅವರು ಕಾನೂನು ಹಾಗೂ ಜನಪರ ಹೋರಾಟ ಮಾಡುವುದಕ್ಕೂ ಅವರು ಸ್ವತಂತ್ರರು ಎಂದು ಅವರು ಹೇಳಿದರು. ನಾನು ಬಿಜೆಪಿ ಪಕ್ಷದ ವತಿಯಿಂದ ಉತ್ತರ ಕೋರಿಯಾ ಪ್ರವಾಸ ಕೈಗೊಂಡಿದ್ದೆ. ಆರ್ಥಿಕ ಕ್ಷೇತ್ರದಲ್ಲಿ ಆ ದೇಶ ಇಡೀ ಜಗತ್ತಿನಲ್ಲಿಯೇ ಐದನೇ ಸ್ಥಾನದಲ್ಲಿದೆ. ಅಲ್ಲಿನ ಶಿಕ್ಷಣ ವ್ಯವಸ್ಥೆಯಂತೂ ಬಹಳ ಉತ್ತಮವಾಗಿದೆ. ಅಂತಹ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಜಾರಿ ಆಗಬೇಕು ಎಂದು ಅವರು ಬಯಸಿದರು.

ಗುರುಮಿಠಕಲ್ ಕ್ಷೇತ್ರದ ಜೆಡಿ(ಎಸ್) ಕಾರ್ಯಕರ್ತನ ಬಾಯಿಗೆ ಬಂದೂಕು ಇಟ್ಟು ಪಿಎಸ್‌ಐ ಬೆದರಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿ(ಎಸ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಯಾದಗಿರಿ ಟೌನ್ ಪೋಲಿಸ್ ಠಾಣೆಯ ಮುಂದೆ ಧರಣಿ ಹಮ್ಮಿಕೊಂಡಿರುವ ಕುರಿತು ಪ್ರಸ್ತಾಪಿಸಿದ ಅವರು, ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಕಾನೂನಿನ ಅಡಿ ಪರಿಹಾರ ಇರುತ್ತದೆ. ವಿವಾದವನ್ನೇ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here