ಅನುಭವ ಮಂಟಪವನ್ನು ಕೇವಲ ಕಲ್ಲು ಮಣ್ಣು ಇಟ್ಟಂಗಿಗಳಿಂದ ಕಟ್ಟಿದ ಕಟ್ಟಡವಾಗಿರಲಿಲ

0
36

ಶಹಾಪುರ: ಕಲ್ಯಾಣವನ್ನು ಹನ್ನೆರಡನೆಯ ಶತಮಾನದಲ್ಲಿ ಪ್ರವೇಶಿಸುವವರಿಗೆ ಯಾವುದೆ ನಿರ್ಬಂಧ ಇರಲಿಲ್ಲ. ಹೆಣ್ಣು ಗಂಡು, ಬಡವ-ಬಲ್ಲಿದ, ಎಂಬ ತಾರತಮ್ಯಗಳಿಲ್ಲದೆ ಸರ್ವರನ್ನೂ ಬಸವಣ್ಣ ತನ್ನತ್ತ ಸೆಳೆದುಕೊಂಡ. ತನ್ನತ್ತ ಬಂದ ಎಲ್ಲರನ್ನು ಮನುಷ್ಯರನ್ನಾಗಿ ಮಾಡಿದ ಎಂದು ಸಿದ್ಧಲಿಂಗೇಶ್ವರ ವಿರಕ್ತ ಮಠ ಸೊನ್ನದ ಡಾ. ಶಿವಾನಂದ ಸ್ವಾಮೀಜಿ ನುಡಿದರು.

ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ಬಸವ ಬೆಳಕು -೯೨ ರ ಲಿಂಗೈಕ್ಯ ವೀರಣ್ಣ ಗುರಪ್ಪ ಸತ್ಯಂಪೇಟೆ ಅವರ ಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾಶ್ಮೀರದಿಂದ ಬಂದ ಅರಸ ಮೋಳಿಗೆಯ ಮಾರಯ್ಯ , ಅಫಘಾನಿಸ್ಥಾನದಿಂದ ಬಂದ ಮರುಳ ಶಂಕರ, ಸೌರಾಷ್ಟ್ರದಿಂದ, ತಮಿಳು ನಾಡಿನಿಂದ ಹರಿದು ಬಂದ ಚೇತನಗಳು ತಮ್ಮ ಮೂಲವನ್ನು ಕಳಕೊಂಡು ಶರಣರಾಗಿ ಪರಿವರ್ತಿತರಾದರು. ಅನುಭವ ಮಂಟಪ ಎಂಬುದು ಮನುಷ್ಯನನ್ನು ರೂಪಿಸುವ ಟಂಕಶಾಲೆಯಾಗಿ ಪರಿವರ್ತನೆಗೊಂಡಿತ್ತು. ಅನುಭವ ಮಂಟಪವನ್ನು ಕೇವಲ ಕಲ್ಲು ಮಣ್ಣು ಇಟ್ಟಂಗಿಗಳಿಂದ ಕಟ್ಟಿದ ಕಟ್ಟಡವಾಗಿರಲಿಲ್ಲ. ಅದು ಕಾಯಕ ಜೀವಿಗಳಾದ ಶರಣರ ಜೀವಧಾತುವಿನಿಂದ ಕಟ್ಟಿದ ಅಭೌತಿಕ ಕಟ್ಟಡವಾಗಿತ್ತು.

Contact Your\'s Advertisement; 9902492681

ನಾವೆಲ್ಲರೂ ಮನುಷ್ಯರ ರೂಪದಲ್ಲಿ ಇದ್ದೇವೆ. ನಮ್ಮೊಳಗೆ ಕಾಮ ಕ್ರೋಧ ಮೋಹ ಮದ ಮತ್ಸರಗಳೆಂಬ ಎಂಟು ಮದಗಳು ನಮ್ಮನ್ನು ಹಿಡಿದು ಕಟ್ಟಿ ಹಾಕಿವೆ. ಶರಣರ ವಚನಗಳ ವಿಚಾರಧಾರೆ ನಮ್ಮನ್ನು ಸ್ಥಾವರದಿಂದ ಜಂಗಮದೆಡೆಗೆ ಕರೆದುಕೊಂಡು ಹೋಗುತ್ತದೆ. ಸುಜ್ಞಾನವನ್ನು ನೀಡಿ ನಮ್ಮೊಳಗಿನ ಅಜ್ಞಾನವನ್ನು ಕಳೆಯುತ್ತವೆ. ಬಸವ ಬೆಳಕಿನಿಂದ ನಮ್ಮ ಮನದೊಳಗಿನ ಕೊಳಕು ಹೋಗುತ್ತದೆ. ನಾವೆಲ್ಲ ಬಸವಣ್ಣನವರ ವಚನಗಳ ಬೆಳಕಿನಲ್ಲಿ ಓಡಾಡಿ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ವಿವರಿಸಿ ಹೇಳಿದರು. ಬಸವಮಾರ್ಗ ಪ್ರತಿಷ್ಠಾನದ ಮೂಲಕ ನಿರಂತರವಾಗಿ ಬಸವನ ಬೆಳಕನ್ನು ಉಣಬಡಿಸುತ್ತಿರುವ ಸತ್ಯಂಪೇಟೆ ಪರಿವಾರ ಗಮನಾರ್ಹವಾದ ಕೆಲಸ ಮಾಡುತ್ತಿದೆ ಎಂದು ಇದೆ ಸಂದರ್ಭದಲ್ಲಿ ಶ್ಲಾಘೀಸಿದರು.

ಬಹಳಷ್ಟು ಜನರಿಗೆ ಮಠಗಳನ್ನು ಪೀಠಾಧಿಪತಿಗಳು ಕಟ್ಟಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿ ಸಮಾಜ ಇದೆ. ಮಠಗಳನ್ನು ಕಟ್ಟಿದ್ದು ಭಕ್ತರೆ ಹೊರತು ಮಠಾಧೀಶರಲ್ಲ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ವಿವರಿಸಿದರು. ಬದಾಮಿಯಲ್ಲಿ ಸ್ಥಾಪಿಸಲಾಗಿರುವ ಶಿವಯೋಗ ಮಂದಿರವೂ ಸಹ ಭಕ್ತರು ಕಟ್ಟಿದ್ದೆ ವಿನಃ ಹಾನಗಲ್ ಕುಮಾರ ಸ್ವಾಮಿಗಳಲ್ಲ ಎಂದವರು ಸ್ಪಷ್ಟ ಪಡಿಸಿದರು. ಹಾನಗಲ್ ಕುಮಾರ ಸ್ವಾಮಿಗಳು ತಮ್ಮ ಪಾರಮ್ಯವನ್ನು ಮರೆಯಲು ಶಿವಯೋಗ ಮಂದಿರವನ್ನು ಭಕ್ತರ ಸಹಾಯದಿಂದ ನಿರ್ಮಿಸಿ, ಜಾತಿ ಜಂಗಮರು ಮಾತ್ರ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆಯಬಹುದು ಎಂಬ ಬೈಲಾವನ್ನು ರೂಪಿಸಿ ಲಿಂಗಾಯತ ಧರ್ಮದ ತತ್ವಗಳನ್ನು ಯಾರೂ ಅರಿಯದಂತೆ ನಾಶ ಮಾಡಿದರು ಎಂದು ಸತ್ಯಂಪೇಟೆ ಆರೋಪಿಸಿದರು.

ಶರಣರ ವಚನಗಳ ಪ್ರಸಾರಕ್ಕೆ ಮಠಾಧೀಶರು ಹೆಚ್ಚು ಆಸಕ್ತಿ ತೋರಲಿಲ್ಲ. ನಾವೇ ಶ್ರೇಷ್ಠ ಶರಣರು ನಮಗಿಂತಲೂ ಮೇಲೆ ಹೇಗಾಗುತ್ತಾರೆ ? ಎಂಬ ಭಾವ ಅವರನ್ನು ಹಿಂದೆ ಕಾಡುತ್ತಿತ್ತು. ಹೀಗಾಗಿ ಬಹುತೇಕ ಮಠಗಳು ಶರಣರ ಸಾಹಿತ್ಯವನ್ನು ಪ್ರಸಾರ ಮಾಡಲು ಹಿಂದೇಟು ಹಾಕಿದವು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ ಅಭಿಪ್ರಾಯ ಪಟ್ಟರು. ಮುಂದುವರೆದು ಮಾತನಾಡಿದ ಅವರು ಶರಣರ ಕುರಿತು ಸಾಕಷ್ಟು ಪುಸ್ತಕಗಳು ಬಂದಿವೆ. ಚರ್ಚೆಗಳು ನಡೆದಿವೆ. ಆದರೆ ಶರಣರ ಬದುಕನ್ನು ನಡೆಯುವ ಅವಶ್ಯಕತೆ ಇಂದು ನಮ್ಮ ಮುಂದೆ ಇದೆ ಎಂದವರು ತಿಳಿಸಿದರು.

ಸಭೆಯಲ್ಲಿ ಗುರುಮಿಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿಗಳು ಉಪಸ್ಥಿತರಿದ್ದರು. ಕಮಲಮ್ಮ ವೀರಣ್ಣ ಸತ್ಯಂಪೇಟೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ರಾಜಶೇಖರ ಹುಲ್ಲೂರು, ಮಹಾದೇವಪ್ಪ ಗಾಳೆನೋರ ವಚನ ಗಾಯನ ಮಾಡಿದರು. ಸಮಾರಂಭದಲ್ಲಿ ವೆಂಕಟಪ್ಪ ಅಲೆಮನಿ, ಡಾ.ಎಸ್.ಎಸ್.ನಾಯಕ, ಶರಣಪ್ಪ ಬಿರಾದಾರ , ಗೀತಾ ರಾಜಶೇಖರ ವಾಗಾ, ಮಹಾಂತೇಶ ಹುಲ್ಲೂರು, ಕವಿತಾ ಚಂದ್ರಶೇಖರ ಕರುಣಾ, ಅಡಿವೆಪ್ಪ ಜಾಕಾ, ಸಿದ್ದಲಿಂಗಪ್ಪ ಆನೇಗುಂದಿ, ಗುಂಡಣ್ಣ ಕಲಬುರ್ಗಿ, ಡಾ.ಭೀಮರಾಯ ಲಿಂಗೇರಿ, ಶಿವಲಿಂಗಪ್ಪ ಮುಖ್ಯ ಗುರುಗಳು, ಶಿವಶಂಕರ ಔರಸಂಗ, ಡಾ. ಬಸವರಾಜ ಇಜೇರಿ, ಡಾ. ಗುರುರಾಜ ಸತ್ಯಂಪೇಟೆ, ಶಿವಕುಮಾರ ಕರದಳ್ಳಿ, ಲಿಂಗಣ್ಣ ಪಡಶೆಟ್ಟಿ, ಡಾ. ಹಡಪದ ರಸ್ತಾಪುರ ಮೊದಲಾದವರು ಹಾಜರಿದ್ದರು. ಕೊನೆಯಲ್ಲಿ ಕಾವೇರಿ ಲಕ್ಷ್ಮಣ ಮತ್ತು ಶರಾವತಿ ಸತ್ಯಂಪೇಟೆ ವಚನ ಗೀತೆ ಹಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು. ಗುರಮ್ಮ ಶರಣಪ್ಪ ನರಕಲದಿನ್ನಿ ವಂದನೆಗಳನ್ನು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here