ಕೊಡಗು: ಕರ್ನಾಟಕದ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದುಹಾಕುವ ಬಿ.ಜೆ.ಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮತ್ತು ವಿದ್ಯಾರ್ಥಿಗಳಿಗೆ ಟಿಪ್ಪುವನ್ನು ನೆನಪಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳ ಘೋಷಣೆ ಕುರಿತು ಪತ್ರಿಕಾಗೋಷ್ಠಿಯು ಪತ್ರಿಕಾ ಭವನ್ ಮಡಿಕೇರಿಯಲ್ಲಿ ಇಂದು ನಡೆಯಿತು.
ಪತ್ರಿಕಾಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಫಯಾಜ್ ದೊಡ್ಡಮನೆ ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂಬುವುದು ಜಗತ್ತು ಕಂಡ ಇತಿಹಾಸವಾಗಿದೆ ಅಲ್ಲದೆ ಕರ್ನಾಟಕದ ಹೆಮ್ಮೆಯು ಕೂಡಾ ಹೌದು. ಟಿಪ್ಪುವಿನ ಆಡಳಿತ ಸುಧಾರಣೆ, ಆರ್ಥಿಕ ನೀತಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಟಿಪ್ಪು ಕೈಗೊಂಡ ಹಲವು ಕಾರ್ಯಕ್ರಮಗಳು ರಾಜ್ಯವನ್ನು ಸಂಪದ್ಬರಿತವನ್ನಾಗಿ ಮಾಡಿತ್ತು. ಟಿಪ್ಪುವಿನ ಸಮಾಜವಾದ ಮತ್ತು ಜಾತ್ಯಾತೀತ ಸಿದ್ದಾಂತವು ಇಂದಿಗೂ ಪ್ರಸ್ತುತ. ಟಿಪ್ಪು ಸುಲ್ತಾನ್ ಅವರಿಗೆ ಸಮಾಜದ ಮೇಲಿದ್ದ ಕಲ್ಪನೆಯು ನಮಗೆ ಸಮಾನತೆಯುಳ್ಳ ದೇಶ ಕಟ್ಟಲು ಮಾದರಿಯಾಗಿದೆ. ಸುಮಾರು 200 ವರ್ಷಗಳ ಹಿಂದೆ ಸಾಮ್ರಾಜ್ಯವನ್ನು ಸ್ಥಾಪಿಸಿ, ಬ್ರಿಟೀಷರ ವಿರುದ್ಧ ಶೌರ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶೈಲಿಯು ಇಂದಿಗೂ ಕೂಡ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಆದರೆ ಟಿಪ್ಪು ಮಾಡಿದ ಎಲ್ಲಾ ಪ್ರಗತಿಪರ ಕೆಲಸಗಳನ್ನು ಈ ದೇಶದ ಫ್ಯಾಶಿಸ್ಟ್ ಸರ್ಕಾರ ಮತ್ತು ಮನುವಾದಿ ಇತಿಹಾಸಕಾರರು ಮರೆಮಾಚುವ ಮತ್ತು ತಿರುಚುವ ಪ್ರಯತ್ನವು ಟಿಪ್ಪುವಿನ ಇತಿಹಾಸವನ್ನು ದೇಶದಿಂದ ಅಳಿಸುವ ಷಡ್ಯಂತ್ರವಾಗಿದೆ. ಕರ್ನಾಟಕದಲ್ಲಿ ಬಿ.ಜೆ.ಪಿ ಸರ್ಕಾರವು ಅಧಿಕಾರಕ್ಕೆ ಬಂದ ತಕ್ಷಣವೇ ಟಿಪ್ಪು ಜಯಂತಿಯನ್ನು ರದ್ದುಮಾಡಿ ರಾಜ್ಯದಲ್ಲಿ ಟಿಪ್ಪು ಹೆಸರಿನ ರಾಜಕೀಯ ಮಾಡಲಾರಂಭಿಸಿತು.
ಇತ್ತೀಚೆಗೆ ಕರ್ನಾಟಕ ಶಿಕ್ಷಣ ಸಚಿವರು ಪಠ್ಯ ಪುಸ್ತಕಗಳಲ್ಲಿನ ಟಿಪ್ಪು ಸುಲ್ತಾನ್ ಕುರಿತಾದ ಪಠ್ಯವನ್ನು ತೆಗೆದುಹಾಕುವ ಹೇಳಿಕೆಯು ಕೂಡಾ ಟಿಪ್ಪುವಿನ ಇತಿಹಾಸವನ್ನು ವಿದ್ಯಾರ್ಥಿಗಳ ಶಿಕ್ಷಣದಿಂದ ಮರೆಮಾಚುವ ಹುನ್ನಾರವಾಗಿದೆ. ಸರ್ಕಾರವು ಟಿಪ್ಪುವಿನ ಇತಿಹಾಸವನ್ನು ಶಿಕ್ಷಣ ಕ್ಷೇತ್ರದಿಂದ ಇಲ್ಲದಾಗಿಸುವ ಪ್ರಯತ್ನವು ದೇಶಕ್ಕೆ ಎಸೆಗುವ ದ್ರೋಹವಾಗಿದೆ. ಒಂದು ವೇಳೆ ಪಠ್ಯಗಳನ್ನು ಸರ್ಕಾರ ತೆಗೆಯಲು ಮುಂದಾದರೆ ಕ್ಯಾಂಪಸ್ ಫ್ರಂಟ್ ರಾಜ್ಯಾದ್ಯಂತ ಬಿ.ಜೆ.ಪಿ ಸರ್ಕಾರದ ವಿರುದ್ಧ ಹೋರಾಡಲಿದೆ ಅಲ್ಲದೆ ಟಿಪ್ಪುವಿನ ಇತಿಹಾಸವನ್ನು ಪ್ರತಿಯೋರ್ವನಿಗೆ ತಲುಪಿಸಲು ಕ್ಯಾಂಪಸ್ ಫ್ರಂಟ್ ಕಾರ್ಯ ಪ್ರವೃತರಾಗಲಿದೆ ಎಂದು ಎಚ್ಚರಿಸಿದರು.
ಬಿ.ಜೆ.ಪಿ ಸರ್ಕಾರವು ಟಿಪ್ಪುವಿನ ಮೇಲೆ ನಡೆಸುತ್ತಿರುವ ಅಪಪ್ರಚಾರವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಹಾಗೂ ಟಿಪ್ಪುವಿನ ಇತಿಹಾಸ ,ಆದರ್ಶ , ಕೊಡುಗೆಯನ್ನು ಕಾಪಾಡುವ ಮತ್ತು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಸಂರಕ್ಷಿಸುವ ಉದ್ದೇಶದಿಂದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ‘ಟಿಪ್ಪು ಮರೆಯಲಾಗದ ದಂತಕಥೆ’ ಎಂಬ ಅಭಿಯಾನವನ್ನು ನವೆಂಬರ್ 5 ರಿಂದ 25 ರ ತನಕ ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ , ಕವನ ಹಾಗು ಚಿತ್ರಕಲಾ ಸ್ಪರ್ಧೆ ವಿಶೇಷವಾಗಿ ಮಕ್ಕಳಿಗೆ ‘ಛೋಟಾ ಸುಲ್ತಾನ್’ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ನಡೆಸಲಿದೆ.
ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಟಿಪ್ಪುವಿನ ಇತಿಹಾಸವನ್ನು ಉಳಿಸುವ ಉದ್ದೇಶದಿಂದ ಸಕ್ರಿಯವಾಗಿ ಭಾಗವಹಿಸಬೇಕಗಿದೆ ಎಂದು ಮನವಿ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿಯಾದ ಅಥಾವುಲ್ಲಾ ಪೂಂಜಲ್‍ಕಟ್ಟೆ, ರಾಜ್ಯ ಸಮಿತಿ ಸದಸ್ಯರಾದ ಮುಹಮ್ಮದ್ ರಿಯಾಝ್ ಹಾಗೂ ಇಮ್ರಾನ್ ಪಿ.ಜೆ ಉಪಸ್ಥಿತರಿದ್ದರು.