ಡೆಂಗ್ಯೂ ಕಾಯಿಲೆಯ ಬಗ್ಗೆ ಮುನ್ನೆಚ್ಚರಿಕೆ ಅವಶ್ಯಕ: ಡಾ.ಸಂತೋಷರೆಡ್ಡಿ

0
73

ಕಲಬುರಗಿ: ಈಚೆಗೆ ರಾಜ್ಯದಲ್ಲಿ ಎಲ್ಲಡೆ ವ್ಯಾಪಕವಾದ ಮಳೆಯಾಗಿರುವುದರಿಂದ ಡೆಂಗ್ಯೂ ಕಾಯಿಲೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ಇದ್ದಕಿದ್ದಂತೆ ತೀರ್ವ ಜ್ವರ, ವಿಪರೀತ ತಲೆನೋವು, ಕಣ್ಣು, ಕೀಲು ನೋವು, ಬಾಯಿ, ವಸಡು, ಮೂಗಿನಿಂದ ರಕ್ತಸ್ರಾವವಾಗುವುದು, ಚರ್ಮದ ಮೇಲೆ ಅಲ್ಲಲ್ಲಿ ರಕ್ತದ ಗುರುತುಗಳು ಕಂಡುಬಂದರೆ ಇವು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಆಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಡು ಸೂಕ್ತ ಚಿಕಿತ್ಸೆ ಪಡೆಯಬೇಕು.ಇದರ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕೈಗೊಳ್ಳುವುದು ಅವಶ್ಯಕವಾಗಿದೆಯೆಂದು ಕುಟುಂಬ ವೈದ್ಯ ಡಾ.ಸಂತೋಷರೆಡ್ಡಿ ಸಲಹೆ ನೀಡಿದ್ದಾರೆ.

ಅವರು ನಗರದ ಆಳಂದ ಚೆಕ್ ಪೋಸ್ಟ್‌ನ ’ಶ್ರೇಯಸ್ ಕ್ಲಿನಿಕ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ’ಡೆಂಗ್ಯೂ ಕಾಯಿಲೆಯ ಮುನ್ನೆಚ್ಚರಿಕೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಉತ್ಪತ್ತಿಯಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಹಗಲಿನ ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಆದ್ದರಿಂದ ಸೊಳ್ಳೆಗಳ ಪರದೆಯನ್ನು ಬಳಸಬೇಕು. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ರೋಗ ಹತೋಟಿಯ ಪ್ರಮುಖ ಕ್ರಮವಾಗಿದೆ. ನೀರು ಸಂಗ್ರಹಿಸುವ ತೊಟ್ಟಿಯನ್ನು ಆಗಾಗ್ಗೆ ತೊಳೆಯಬೇಕು. ಬಯಲಿನಲ್ಲಿ ಕಂಡುಬರುವ ತ್ಯಾಜ್ಯಗಳಾದ ಟಯರ್, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿಯಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ, ಅವುಗಳನ್ನು ಸೂಕ್ತ ವಿಲೇವಾರಿ ಮಾಡುವಂತಹ ಅನೇಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಗ್ಯೂ ಜ್ವರವನ್ನು ಬರದಂತೆ ತಡೆಯಬಹುದಾಗಿದೆಯೆಂದು ಅನೇಕ ಕ್ರಮಗಳನ್ನು ತಿಳಿಸಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ಅದರಲ್ಲಿ ಡೆಂಗ್ಯೂ ಪ್ರಮುಖವಾಗಿದ್ದು, ಕಾಯಿಲೆ ಬಂದ ನಂತರ ಆಸ್ಪತ್ರೆಗೆ ತೆರಳದಂತಾಗುವುದನ್ನು ತಪ್ಪಿಸಬೇಕಾದರೆ ವೈದ್ಯರು ಸೂಚಿಸಿದ ಇಂತಹ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬಳಗದ ವತಿಯಿಂದ ಕಳೆದ ಎರಡು ವರ್ಷಗಳಿಂದ ನುರಿತ ವೈದ್ಯರಿಂದ ಮುಂಜಾಗ್ರತೆ ಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿಯನ್ನು ಮೂಡಿಸಲಾಗುತ್ತಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮಶೇಖರ ಮೂಲಗೆ, ರಾಜಶೇಖರ ಬಿ.ಮರಡಿ, ಕಾರ್ತಿಕ, ಡಾ.ಯುಸಫ್ ಮಿಯಾ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here