ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸಿಕೊಂಡು ಹೋದ ಘಟನೆ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ನಿವಾಸಿ ಫರ್ದಿನ್ ಗೌಸ್ ಇನಾಮದಾರ್ ಮತ್ತಿತರರು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಬಾಲಕಿಯ ಪಾಲಕರು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದ್ದು, 17 ವರ್ಷದ ಬಾಲಕಿ ಕಲಬುರಗಿಯಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು. ಈ ವೇಳೆ ಇಂಜಿನಿಯರಿಂಗ್ ಓದುತ್ತಿದ್ದ ಎನ್ನಲಾದ ಫರ್ದಿನ್ ಗೌಸ್ ಇನಾಮದಾರ್ ಜೊತೆ ಸಲುಗೆ ಬೆಳೆದಿತ್ತು.
ಇದು ಬಾಲಕಿಯ ಪಾಲಕರ ಗಮನಕ್ಕೆ ಬಂದು ಅವರು ಬಾಲಕಿಯನ್ನು ಬಳೂರ್ಗಿ ಗ್ರಾಮದಲ್ಲಿರುವ ಮನೆಯಲ್ಲಿಟ್ಟಿದ್ದರು. ಈ ವಿಷಯ ತಿಳಿದು ಫರ್ದಿನ್ ಮತ್ತು ಆತನ ಗೆಳೆಯರು ಸೇರಿ ಬಳೂರ್ಗಿಗೆ ಹೋಗಿ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೋಷಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಪಹರಣವಾದ ಬಾಲಕಿಯ ತಲೆಗೆ ಬ್ಯಾಂಡೇಜ್ ಹಾಕಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಅಪಘಾತದಲ್ಲಿ ಗಾಯಗೊಂಡಿದ್ದಾಳೋ ಮತ್ತಿನ್ನೇನಾದರೂ ಆಗಿದೆಯೋ ಎಂಬುವುದನ್ನೂ ಇದುವರೆಗೆ ಮಾಹಿತಿ ತಿಳಿದುಬಂದಿಲ್ಲ.
ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಬಾಲಕಿಯನ್ನು ಎಲ್ಲಿಗೆ ಅಪರಹರಿಸಿಕೊಂಡು ಹೋಗಲಾಗಿದೆ. ಬಾಲಕಿಗೆ ಏನಾಗಿದೆ. ಗಾಯಗೊಂಡಿದ್ದರೆ ಯಾವ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂಬುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಅಫಜಲಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಬಾಲಕಿ ಮತ್ತು ಅಪಹರಣಕಾರರಿಗಾಗಿ ಶೋಧ ನಡೆಸುತ್ತಿದ್ದಾರೆ.
ಅಫಜಲಪುರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.