ಸುರಪುರ: ರಾಯಚೂರಿನಲ್ಲಿ ವಿದ್ಯಾರ್ಥಿನಿ ಮಧು ಪತ್ತಾರಲ ಕೊಲೆ ಹಾಗು ಶ್ರೀಲಂಕಾದಲ್ಲಿ ನಡೆದ ಉಗ್ರರ ಬಾಂಬ್ ದಾಳಿ ಘಟನೆಯನ್ನು ಖಂಡಿಸಿ ಸುರಪುರದಲ್ಲಿ ಸಾಮೂಹಿಕ ಸಂಘಟನೆಗಳಿಂದ ಮೇಣದ ಬತ್ತಿ ಹಿಡಿದು ಶಾಂತಿಯುತ ಮೆರವಣಿಗೆ ನಡೆಸಿದರು.
ಗುರುವಾರ ಸಂಜೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಡಾ. ಬಿ.ಆರ್. ಅಂಬೇಡ್ಕರ ವೃತ್ತದ ವರೆಗೆ ಮೌನ ಮೆರವಣಿಗೆ ನಡೆಸಿದರು. ನಂತರ ಡಾ. ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಜಮಾಗೊಂಡ ಕಾರ್ಯಕರ್ತರನ್ನುದ್ದೇಶಿಸಿ ಹೋರಾಟಗಾರ ದೇವಿಂದ್ರಪ್ಪ ಪತ್ತಾರ ಮಾತನಾಡಿ, ಇತ್ತೀಚೆಗೆ ದೇಶದ ಅನೇಕ ಕಡೆಗಳಲ್ಲಿ ಯುವತಿಯರ ಮೇಲೆ ಅತ್ಯಾಚಾರ ಕೊಲೆಗಳಂತಹ ಪ್ರಕರಣಗಳು ಹೆಚ್ಚಾಗಿವೆ ಸರಕಾರಗಳು ಇಂತಹ ನೀಚ ಕೃತ್ಯ ಎಸಗುವವರ ಮೇಲೆ ಕಠಿಣ ಕಾನೂನು ಜಾರಿಗೊಳಸಬೇಕಿದೆ. ಕೇಂದ್ರ ಸರಕಾರ ಹನ್ನೆರಡು ವರ್ಷದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಮರಣದಂಡನೆ ಕಾನೂನು ಮಾಡಿದೆ, ಆದರೆ ಹನ್ನೆರಡು ವರ್ಷ ಮೇಲ್ಪಟ್ಟ ಯುವತಿಯರದು ಪ್ರಾಣ ಮಾನಕ್ಕೆ ಬೆಲೆ ಇಲ್ಲವೆ? ಆದ್ದರಿಂದ ಮರಣದಂಡನೆ ಶಿಕ್ಷೆಯನ್ನು ಎಲ್ಲಾ ಅತ್ಯಾಚಾರಿಗಳಿಗೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಬಾಂಬ್ ದಾಳಿಯಲ್ಲಿ ಮೂರು ನೂರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸತ್ತು,ಐದು ನೂರಕ್ಕು ಹೆಚ್ಚಿನ ಜನರು ಗಾಯಗೊಂಡಿದ್ದಾರೆ,ಇದನ್ನು ಜಗತ್ತೆ ಖಂಡಿಸಿದೆ.ಅದರಂತೆ ಇಂತಹ ಘಟನೆಗಳ ಕಡಿವಾಣಕ್ಕೆ ಜಗತ್ತು ಎದ್ದು ನಿಲ್ಲಬೇಕಿದೆ ಎಂದರು.
ಮತ್ತೋರ್ವ ಮುಖಂಡ ಮಲ್ಲಯ್ಯ ಕಮತಗಿ ಮಾತನಾಡಿ,ರಾಯಚೂರಿನಲ್ಲಿಯ ವಿದ್ಯಾರ್ಥಿ ಹತ್ಯೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗು ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯು ಹೇಯ ಕೃತ್ಯವಾಗಿದ್ದು ಉಗ್ರರು ಯಾವುದೆ ಮತ ಧರ್ಮದವರಾಗಿರಲಿ ಅವರು ಮಾನವ ಜೀವ ವಿರೋಧಿಗಳು ಇವರನ್ನು ಮಟ್ಟ ಹಾಕುವುದು ಇಂದಿನ ಅವಶ್ಯವಾಗಿದೆ.ಇದಕ್ಕಾಗಿ ಅಂತರಾಷ್ಟ್ರಿಯ ಮಟ್ಟದಲ್ಲಿ ಕಾನೂನು ರೂಪಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಈ ಎರಡೂ ಘಟನೆಗಳ ಖಂಡಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ಭೀಮರಾಯ ಸಿಂಧಗೇರಿ, ಯಲ್ಲಪ್ಪ ಚಿನ್ನಾಕಾರ, ಮಾಳಪ್ಪ ಕಿರದಹಳ್ಳಿ, ಧರ್ಮರಾಜ ಬಡಿಗೇರ, ಉಸ್ತಾದ ವಜಾಹತ್ ಹುಸೇನ, ಆಕಾಶ ಕಟ್ಟಿಮನಿ, ರಮೇಶ ಅರಕೇರಿ, ರಫಿಕ ಸುರಪುರ, ಮಹೇಶ ಕರಡಕಲ್, ಕಾಳಪ್ಪ ಬಡಿಗೇರ, ಪ್ರಭು ಚನ್ನಪಟ್ಟಣ, ಮೋನಪ್ಪ ಬಡಿಗೇರ, ಮಹೇಶ ಪತ್ತಾರ, ರಾಜು ಹಳಿಸಗರ, ಬಾಬು ಪತ್ತಾರ, ಕಾಂತಪ್ಪ ಪತ್ತಾರ, ವಿಜಯ ಹಳಿಸಗರ, ಶಂಕರ ಪತ್ತಾರ, ವಿರೇಶ ಕುಂಟೋಜಿ, ಸುರೇಶ ಪತ್ತಾರ, ಹೇಮಂತ, ಭಾನ್ಕರ, ಮಹೇಶ ಬಂಗಾಲಿ, ವಾಜಿದ್ ಬೈಲ್ ಪತ್ತಾರ ಸೇರಿದಂತೆ ಅನೇಕರಿದ್ದರು.