ಕಲಬುರಗಿ: ಶಾಸಕರಾಗಿದ್ದ ಡಾ. ಉಮೇಶ ಜಾಧವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಲಬುರಗಿ ಲೋಕಸಭೆ ಚುನಾವಣೆಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿರುವುದರಿಂದ ಮೇ 19ರಂದು ಚಿಂಚೋಳಿ ಮತಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಾ. ಜಾಧವ ಪುತ್ರ ಅವಿನಾಶ ಜಾಧವ ಅವರ ಹೆಸರನ್ನು ಬಿಜೆಪಿಯಿಂದ ಈಗಾಗಲೇ ಅಖೈರುಗೊಳಿಸಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದಿಂದ ಇನ್ನೂ ಯಾರ ಹೆಸರನ್ನು ಅಂತಿಮಗೊಳಿಸಿಲ್ಲ. ಮಾಜಿ ಸಚಿವ ಬಾಬುರಾವ ಚವ್ಹಾಣ, ಯುವ ಮುಖಂಡ ಸುಭಾಷ ರಾಠೋಡ್ ಅವರ ಹೆಸರುಗಳು ಕೇಳಿಬರುತ್ತಿವೆ.
ಟಿಕೆಟ್ ಗಾಗಿ ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಇಬ್ಬರು ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಬಿಜೆಪಿಯವರು ಬಂಜಾರಾ ಸಮುದಾಯದವರಿಗೆ ಟಿಕೆಟ್ ನೀಡಿದ್ದರಿಂದ ಲಿಂಗಾಯತರೇ ಬಹು ಸಂಖ್ಯಾತರಾಗಿರುವ ಈ ಕ್ಷೇತ್ರದಿಂದ ಮತ ವಿಭಜನೆ ದೃಷ್ಟಿಯಿಂದ ಕಾಂಗ್ರೆಸ್ ನವರು ಸಹ ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಇವರಿಬ್ಬರಿಗೂ ಕೈ ತಪ್ಪಿಸಿ ಲೋಕಲ್ ನವರಿಗೆ ಟಿಕೆಟ್ ನೀಡಲಾಗುವುದು ಎಂದು ಕೂಡ ಹೇಳಲಾಗುತ್ತಿದೆ. ಬಿಜೆಪಿ ಕಡೆಯಿಂದ ತಮಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಮಾಜಿ ಸಚಿವ ಸುನಿಲ್ ವಲ್ಯಾಪುರೆ ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ನಡೆ ಯಾವ ಕಡೆ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.