ಪುನರ್ ನೇಮಕಾತಿಗೆ ಆಗ್ರಹಿಸಿ ರೈತ ಅನುವುಗಾರರ ಬೃಹತ್ ರ್ಯಾಲಿ

0
386

ಕಲಬುರಗಿ:  ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 6500 ರೈತ ಅನುವುಗಾರರನ್ನು ಪುನರ್ ನೇಮಕಾತಿ ಮಾಡಿಕೊಂಡು ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದಲ್ಲಿ ಶ್ರಮಜೀವಿಗಳ ವೇದಿಕೆಯ ನೇತೃತ್ವದಲ್ಲಿ ರೈತ ಅನುವುಗಾರರು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.

ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರ ನೇತೃತ್ವದಲ್ಲಿ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಮೆರವಣಿಗೆಯಲ್ಲಿ ರಿಯಾಜುದ್ದೀನ್, ಮಹಾದೇವ್ ನರೋಣಿ, ಜಗದೀಶ್, ಭೀಮರಾವ್ ಪೂಜಾರಿ, ಬಸವರಾಜ್, ಬಸ್ಸಣ್ಣ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ರೈತ ಅನುವುಗಾರರಿಗೆ ಮಾಸಿಕ 10,000ರೂ.ಗಳ ಗೌರವಧನ ನಿಗದಿಗೊಳಿಸುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಶಿವಶಂಕರ್ ರೆಡ್ಡಿಯವರು ಮೂಲತ: ಕೃಷಿ ಕುಟುಂಬದಿಂದ ಬಂದಿದ್ದರಿಂದ ಅವರಿಗೆ ಬೇಡಿಕೆಗಳು ಮನದಟ್ಟಾಗಿದ್ದರಿಂದ ರೈತ ಅನುವುಗಾರರಿಗೆ ಮಾಸಿಕ 10,000ರೂ.ಗಳ ಗೌರವ ವೇತನ ಹೆಚ್ಚಳ ಹಾಗೂ ಪುನರ್ ನೇಮಕಾತಿಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಆದಾಗ್ಯೂ, ಆ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಬೇಡಿಕೆಯನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಈ ಕುರಿತು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಮನವಿ ಮಾಡಲಾಗಿದೆ. ಅವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ಹೋರಾಟವನ್ನು ರೂಪಿಸಲಾಗಿದೆ. ಈ ಚಳುವಳಿಗೆ ಸ್ಪಂದಿಸದೇ ಹೋದಲ್ಲಿ ಡಿಸೆಂಬರ್ 15ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಮೊದಲು ಗ್ರಾಮ ಸೇವಕ ಹುದ್ದೆಗಳು ಇದ್ದು, ಆ ಹುದ್ದೆಗಳನ್ನು ರದ್ದುಪಡಿಸಿದ್ದರಿಂದ ಕಳೆದ 2008-2009ರಲ್ಲಿ ಭೂಚೇತನ ಯೋಜನೆ ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ 2017ರಲ್ಲಿ ರೈತ ಅನುವುಗಾರರನ್ನು ನೇಮಕ ಮಾಡಲಾಗಿತ್ತು. ಯೋಜನೆ ಮುಂದುವರೆಸದೇ ಕೃಷಿ ಭಾಗ್ಯ ಯೋಜನೆ, ಮಣ್ಣು ಪರಿಶೀಲನೆ, ಎನ್‍ಎಫ್‍ಎಸ್‍ಎಂ ಯೋಜನೆ, ಬೀಜೋಪಚಾರ, ಶ್ರೀಧಾನ್ಯ ಮುಂತಾದ ಯೋಜನೆಗಳ ಅನುಷ್ಠಾನಕ್ಕೆ ರೈತ ಅನುವುಗಾರರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಸದ್ಯದ ವ್ಯವಸ್ಥೆಯಲ್ಲಿ ರೈತ ಅನುವುಗಾರರಿಗೆ ಮಾಸಿಕ ನಿರ್ದಿಷ್ಟ ವೇತನವಿಲ್ಲ. ಕಡ್ಡಾಯವಾಗಿ ಅವರನ್ನೇ ಮುಂದುವರೆಸುವ ಆದೇಶವೂ ಇಲ್ಲ. ಹೀಗಾಗಿ ಅತಂತ್ರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ರಾಜ್ಯ ಸರ್ಕಾರವು ಅವರಿಗೆ ಮಾಸಿಕ 10,000ರೂ.ಗಳ ಗೌರವ ಧನ ನಿಗದಿಪಡಿಸಿ, ಪುನರ್ ನೇಮಕಾತಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ನೆರೆಯ ಆಂಧ್ರ ಹಾಗೂ ತೆಲಂಗಾಣ್ ರಾಜ್ಯಗಳಲ್ಲಿ ರೈತ ಅನುವುಗಾರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದೇ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here