ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಹೊರಡಿಸಿದ ಸುತ್ತೋಲೆಯ ಕೈಪಿಡಿಯಲ್ಲಿ ಸಂವಿಧಾನವನ್ನು ಅಂಬೇಡ್ಕರ್ ಅವರೊಬ್ಬರೇ ರಚಿಸಿಲ್ಲ ಎಂದು ನಮೂದಿಸಿದ್ದರಿಂದ ಕೂಡಲೇ ಸಂಬಂಧಿಸಿದ ಸಚಿವ ಸುರೇಶಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಲಿತ ಸೇನೆಯ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ನಡೆಸಿದರು ಹಾಗೂ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಹಣಮಂತ್ ಯಳಸಂಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿ.ಕೆ. ಮದನಕರ್, ಶಿವಲಿಂಗ್ ದೊಡ್ಡಮನಿ, ಗೌಸ್ ಬಾಬಾ ಜುನೈದಿ, ಶಿವಕುಮಾರ್ ಮುಡ್ಡಿ, ಶರಣು ಕವಲಗಾ, ಗುರು ಮಾಳಗೆ, ಶಿವಕುಮಾರ್ ಗೋಲಾ, ಮಲ್ಲಿಕಾರ್ಜುನ್ ಬೋಳನಿ, ಕಾಶೀನಾಥ್ ಸಿಂಧೆ, ರವಿ ದ್ಯಾನನ್ನವರ್, ಶ್ರೀಕಾಂತ್ ರೆಡ್ಡಿ, ಪ್ರಕಾಶ್ ಮ್ಯಾಗೇರಿ ಮುಂತಾದವರು ಪಾಲ್ಗೊಂಡಿದ್ದರು.
ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮದ ಕುರಿತು ಟಿ.ಟಿ. ಕೃಷ್ಣಮಾಚಾರಿ, ಕೃಷ್ಣಚಂದ್ರ ಶರ್ಮಾ, ಪಂಡಿತ್ ಲಕ್ಷ್ಮೀಕಾಂತ್ ಮೇತ್ರಾ, ಅನಂತ್ ಶಯನಮ್ ಅಯ್ಯಂಗಾರ್, ಮಹಿಬೂಬ್ ಅಲಿ ಬೇಗ್ ಸಾಹೇಬ್, ಡಾ. ಬಾಬು ರಾಜೇಂದ್ರ ಪ್ರಸಾದ್, ಶೇಠ್ ಗೋವಿಂದ್ ದಾಸ್, ಆರ್.ವಿ. ಧೂಲೇಕರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಜೇಟಾ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಮುಂತಾದವರು ಹಾಡಿ ಹೊಗಳಿದರೂ ಸಹ ಅದರ ಪ್ರಜ್ಞೆ ಇಲ್ಲದೇ ಮನುವಾದಿಗಳು ಇಂತಹ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಡಾ. ಅಂಬೇಡ್ಕರ್ ಅವರಿಗೆ ಅವಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಅವರೂ ಹೊಣೆಯಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಮತ್ತೊಮ್ಮೆ ಇಂತಹ ಅಪಪ್ರಚಾರ ಘಟಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.