ಕಲಬುರಗಿ: ಯಾವುದೇ ಒಂದು ಭಾಷೆ ನಾವು ಬಳಸಿದಷ್ಟು ಅದು ತಾನಾಗಿಯೇ ಬೆಳೆಯುತ್ತದೆ. ಹಾಗಾಗಿ, ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದನ್ನು ಬೆಳೆಸೋಣ ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಶಿವಲಿಂಗೇಶ್ವರ ಮಠದ ಹೊರಾಂಗಣದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಶುಕ್ರವಾರ ನಡೆದ ಗಡಿನಾಡು ಹಬ್ಬ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ಏಕೀಕರಣಕ್ಕಾಗಿ ಅನೇಕ ಮಹಾನುಭಾವರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸುವ ಮೂಲಕ ನಾವೂ ಕೂಡ ಏನಾದರೂ ಸಾಧಿಸಲಿಕ್ಕೆ ಪ್ರಯತ್ನಿಸಬೇಕೆಂದರು. ಈ ನೆಲದ ಪರಂಪರೆಯನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಸುಭಾಷ ಆರ್.ಗುತ್ತೇದಾರ, 12ನೇ ಶತಮಾನದ ಬಸವಾದಿ ಶರಣರು ವಚನಗಳನ್ನು ಕನ್ನಡದಲ್ಲೇ ರಚಿಸುವ ಮೂಲಕ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ ಎಂದ ಅವರು, ಕನ್ನಡ ಭಾಷೆಯೇ ಕರ್ನಾಟಕದಲ್ಲಿ ಸಾರ್ವಭೌಮವಾಗಬೇಕು ಎಂದರು. ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗ ಹಳಿಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಂದೀಪ ಭರಣಿ, ಪ್ರಮುಖರಾದ ವೀರಣ್ಣಾ ಮಂಗಾಣಿ, ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಎಸ್ ಪಿ.ಸುಳ್ಳದ, ಗಿರೀಶ ಜಕಾಪುರೆ ಸೇರಿ ಅನೇಕರಿಗೆ ಕಲ್ಯಾಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾದನ ಹಿಪ್ಪರಗಾ ಶಿವಲಿಂಗೇಶ್ವರ ಮಠದ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.