ಸುರಪುರ: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ರಂಗಂಪೇಟೆಯಲ್ಲಿನ ಎಲ್ಲಾ ಬಹುತೇಕ ರಸ್ತೆಗಳ ಅಗಲೀಕರಣ ಶೀಘ್ರವೆ ಆರಂಭವಾಗಲಿದೆ ಎಂದು ನಗರಸಭೆ ಆಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದರು.
ರಂಗಂಪೇಟೆಯಲ್ಲಿನ ರಸ್ತೆಗಳ ಅಗಲೀಕರಣಕ್ಕಾಗಿ ಗುರುತು ಕಾರ್ಯಾಚರಣೆಯ ನೇತೃತ್ವ ವಹಿಸಿ ಮಾಹಿತಿ ನೀಡಿ,ಹಿಂದೆಯೇ ರಸ್ತೆಗಳ ಅಗಲೀಕರಣ ಆಗಬೇಕಿತ್ತು ಆದರೆ ಕೇಬಲ್ ಮತ್ತು ಪೈಪಲೈನ್‌ಗಳ ಅಳವಡಿಸಲು ಬೇಕಾಗುವ ಅನುದಾನಕ್ಕಾಗಿ ಅಗಲೀಕರಣ ವಿಳಂಬಗೊಂಡಿತ್ತು ಈಗ ಶಾಸಕರು ಅನುದಾನ ಒದಗಿಸಿದ್ದು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಒಂದು ಸಭೆ ನಡೆಸಿ ಅಗಲೀಕರಣಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ನಗರದ ಎಲ್ಲಾ ಕಡೆಯ ರಸ್ತೆಗಳನ್ನು ಸರಕಾರದ ಆದೇಶದಂತೆ ನಲವತ್ತಾರು ಫೀಟ್‌ಗಳ ಅಗಲಗೊಳಿಸಲಾಗುವುದು. ಶೀಘ್ರದಲ್ಲಿ ಅಗಲೀಕರಣ ಆರಂಭಗೊಳ್ಳಲಿದೆ – ಜೀವನ್ ಕುಮಾರ ಕಟ್ಟಿಮನಿ ನಗರಸಭೆ ಆಯುಕ್ತ.
ಈಗಾಗಲೆ ಹುಬ್ಬಳ್ಳಿ ಮೂಲದ ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು ಕಾಮಗಾರಿ ಆರಂಭ ಮಾಡಲಿದ್ದಾರೆ.ನಗರದಲ್ಲಿನ ಇಕ್ಕಟ್ಟಾದ ರಸ್ತೆಗಳಿಂದಾಗಿ ಜನರು ಓಡಾಟಕ್ಕೆ ತೊಂದರೆಯಾಗಿತ್ತು,ಮುಂದೆ ಜನರಿಗೆ ಓಡಾಟಕ್ಕೆ ಅನುಕೂಲವಾಗಲಿದೆ.ಈಗ ಅಗಲೀಕರಣಕ್ಕಾಗಿ ಮಂಗಲ ಬಜಾರ್,ಮರಗಮ್ಮ ದೇವಸ್ಥಾನ ರಸ್ತೆ,ಮಾರ್ಕೆಟ್ ರಸ್ತೆಯಿಂದ ಹನುಮಾನ ಮಂದಿರವರೆಗೆ ಗುರುತು ಹಾಕಲಾಗುತ್ತಿದ್ದು ಬಹುತೇಕ ಕಾರ್ಯಾಚರಣೆ ಮುಗಿದಂತಾಗಿದೆ.ಇದಕ್ಕೆ ಜನರಿಂದಲೂ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಸಹಾಯಕ ಅಭಿಯಂತರ ಗುಪ್ತಾ,ಕಿರಿಯ ಅಭಿಯಂತರ ಸುನೀಲ್ ನಾಯಕ,ಆರ್.ಐ ಲಕ್ಷ್ಮಣ ಕಟ್ಟಿಮನಿ,ಶಿವಪುತ್ರ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.