ಆಳಂದ: ಹಲವಾರು ವರ್ಷಗಳಿಂದ ಆಳುವ ಸರ್ಕಾರಗಳು ರೈತರನ್ನು ಕಡೆಗಾಣಿಸುತಲೇ ಬರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಆಳುವ ಸರ್ಕಾರಳಿಗೆ ತಕ್ಕ ಶಾಸ್ತಿ ಎದುರಿಸಬೇಕಾದಿತು ಎಂದು ರಾಜ್ಯ ರೈತ ಸಂಘದ ಉತ್ತರ ಕರ್ನಾಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಅವರು ಗುಡಿಗಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ರೈತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬರ, ನೆರೆಗಳಿಂದ ಜನ ತತ್ತರಿಸಿದರು ಸಹ ಸಕಾಲಕ್ಕೆ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿರುವ ಸರ್ಕಾರ ಸಂಕಷ್ಟದಲ್ಲಿ ಬೆಳೆದು ಮಾರುಕಟ್ಟೆಗೆ ತಂದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲು ಸಾಧ್ಯವಾಗುತ್ತಿಲ್ಲ. ರೈತರಿಗಾಗಿ ಅನೇಕ ಯೋಜನೆಗಳ ಅನುಷ್ಠಾನ ಕೈಗೊಳ್ಳದೆ ಕಾಗದದಲ್ಲೇ ಕೊಳೆಯುತ್ತಿವೆ. ಸಂಬಂಧಿತ ಅಧಿಕಾರಿಗಳು ಜನ ಪ್ರತಿನಿಧಿಗಳು ಈ ಕುರಿತು ಸ್ಪಂದಿಸದೆ ಮಜಾ ರಾಜಕಾರಣದಲ್ಲೇ ತೊಡಗಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ರಾಜ್ಯದ ಮುಖ್ಯಮಂತ್ರಿಗಳು ರೈತರ ನೆರವಿಗೆ ಬರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀರಾವರಿ ಒತ್ತು ನೀಡಬೇಕು. ರೈತರ ಅನೇಕ ಬೇಡಿಕೆಗಳಿಗಾಗಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಇದಕ್ಕೆ ರೈತರ ಒಗ್ಗಟ್ಟಿನಿಂದ ಸಂಘಟಿತರಾಗಿ ಆಳುವ ಸರ್ಕಾರಕ್ಕೆ ಕೇಳುವ ಧ್ವನಿಯಾಗಿ ನಿಂತರೆ ಮಾತ್ರ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯವಿದೆ ಎಂದು ಅವರು ಕರೆ ನೀಡಿದರು. ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಅಂಬ್ರೇಶಗೌಡ ಬಳಬಟ್ಟಿ, ಉಪಾಧ್ಯಕ್ಷ ನಾಗೇಂದ್ರಪ್ಪಾ ಥಂಬೆ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಂಜುಳಾ ಭಜೆಂತ್ರಿ, ಕಾಯಾಧ್ಯಕ್ಷೆ ಜಗದೇವಿ ಹೆಗಡೆ, ಕಾರ್ಯಾಧ್ಯಕ್ಷ ಸಂತೋಷ ರಾಠೋಡ, ಜೆವರ್ಗಿ ಅಧ್ಯಕ್ಷೆ ನಿಂಗಮ್ಮ, ಕಮಲಾಬಾಯಿ, ಶ್ರೀದೇವಿ, ಶಿವುಪೂಜಪ್ಪ ಪಾಟೀಲ ಮುನ್ನೊಳ್ಳಿ, ದತ್ತಣ್ಣಾ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ರೈತ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಮೆ ಮಾಡಲಾಯಿತು. ವಿಜಯಕುಮಾರ ಹತ್ತರಕಿ (ಅಧ್ಯಕ್ಷ), ಬಸವರಾಜ ಪಿ. ಹತ್ತರಕಿ (ಗೌರವ ಅಧ್ಯಕ್ಷ) ರಾಜು ಡಾಕೆ ಕಣಮುಸ್ (ಉಪಾಧ್ಯಕ್ಷ), ವಿಜಯಕುಮಾರ ಎಸ್. ಹತ್ತರಕಿ (ಕಾರ್ಯದರ್ಶಿ), ಸಿದ್ದು ವೇದಶೆಟ್ಟಿ ಮುನ್ನೋಳ್ಳಿ (ಕಾಯಾಧ್ಯಕ್ಷ), ಅಶೋಕ ಹತ್ತರಕಿ (ನಗರ ಅಧ್ಯಕ್ಷ), ಬಿಸ್ಮಿಲ್ಲಾ ನದಾಪ ( ಮಹಿಳಾ ಅಧ್ಯಕ್ಷೆ), ಸೈನಾಜ್ ಬೇಗಂ (ಕಾರ್ಯಾಧ್ಯಕ್ಷೆ), ಸಂಗೀತಾ ಜೋತೆ (ಉಪಾಧ್ಯಕ್ಷೆ), ಬಂಡು ಸ್ವಾಮಿ, ಮಲ್ಲಿನಾಥ ಪಾಟೀಲ, ಸಿದ್ಧು ಲೆಂಡೆ, ರಾಚಪ್ಪ ಕೊಡ್ಲೆ, ಅಮರ ವಾಡೇಕರ್, ರಾಜು ವಾಡೇಕರ್ ಮತ್ತು ಪಿಂಟು ಲೆಂಡೆ, ಬಾಬು ಮಾಂಜ್ರೆ ( ಕಾರ್ಯಕಾರಿ ಸದಸ್ಯರು), ಅವರನ್ನು ಆಯ್ಕೆ ಮಾಡಲಾಯಿತು.