ಸೇಡಂ: ಡಾ. ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಅವರು ಬರೆದಿರುವ ಸಂವಿಧಾನವನ್ನು ಅರಿಯಬೇಕು. ಡಾ. ಅಂಬೇಡ್ಕರ್ ಸಂವಿಧಾನದ ಮೂಲ ಆಶಯವೆ ಸಾಮಾಜಿಕ ನ್ಯಾಯವಾಗಿದೆ ಎಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಾಸುದೇವ ಸೇಡಂ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ಶುಕ್ರವಾರ ಸಂವಿಧಾನ ಸಮರ್ಪಣಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಡಾ. ಅಂಬೇಡ್ಕರರು ಆರೋಗ್ಯವನ್ನು ಬದಿಗಿಟ್ಟು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದ್ದಾರೆ. ಭಾರತ ದೇಶದಲ್ಲಿ ಹಿಂದುಳಿದ ಪ್ರದೇಶಗಳು ಇರಬಾರದು ಎಂಬುದು ಬಾಬಾ ಸಾಹೇಬರ ನಿಲುವಾಗಿತ್ತು. ನಿಜವಾಗಿಯೂ ಪ್ರದೇಶ ಹಿಂದುಳಿದಿದ್ದರೆ 371 ಕಾಲಂ ಇರಬೇಕು ಅಂತಾ ಮುಂದಾಲೋಚಿಸಿದ್ದರು. ಅದರ ಪ್ರತಿಫಲವೇ ನಮ್ಮ ಕಲ್ಯಾಣ ಕರ್ನಾಟಕದ 371(J) ಎಂದು ಸಂವಿಧಾನದ ಕುರಿತು ನೆನಪಿಸಿದರು.
ಪ್ರಭಾರಿ ಕುಲಪತಿ ಪ್ರೊ.ಪರಿಮಳ ಅಂಬೇಕರ್ ಮಾತನಾಡಿˌ
ಎಲ್ಲ ಧರ್ಮ, ವರ್ಗ, ಲಿಂಗ, ಭಾಷೆಯ ಜನರಿಗೆ ಕಾನೂನಾತ್ಮಕ ಚೌಕ್ಕಟ್ಟನ್ನು ಸಂವಿಧಾನ ಒಡಗಿಸಿಕೊಟ್ಟಿದೆ. ಅಂತಹ ಸಂವಿಧಾನವನ್ನು ಅವರು ನಮಗೆ ಅರ್ಪಿಸಿದ್ದಾರೆ. ಮಾತಾಡಿದರೆ ಕೆಲಸವಾಗುವುದಿಲ್ಲ. ಬೌದ್ಧಿಕ ವಿಚಾರ, ಸಿದ್ಧಾಂತಗಳನ್ನು ಜೀವನದ ಜೊತೆ ತಳಕು ಹಾಕಿ ನಿಲ್ಲುವ ಪ್ರತಿಕ್ರಿಯೆ ನಮಗಿರಬೇಕು ಎಂದು ನಂಬಿದವರು ಬಾಬಾ ಸಾಹೇಬರು ಎಂದರು.
ಡಾ.ಕರಿಗುಳೇಶ್ವರ ಫರತಾಬಾದ, ಶಿವಶರಣಪ್ಪ ಕೆಂಚಗೊಂಡ, ಕರಿಬಸಮ್ಮ ಪೂಜಾರಿ, ಸಂಜುಕುಮಾರ್ ಪಟ್ಟಣಕರ, ಡಾ.ಅನಿಲ ಟೆಂಗಳಿ, ದಿನೇಶ್ ದೊಡ್ಡಮನಿ, ಮಹಾದೇವಿ ಹಿರೇಮಠ, ಗುರುಲಿಂಗಮ್ಮ ಸಜ್ಜನ್, ಮಿಲಿಂದ್ ಸುಳ್ಳದ, ಬಾಬುರಾವ್ ಬೀಳಗಿ, ಗಂಗಾಧರ್, ಮಾಡಬೂಳ್ ಉಪಸ್ಥಿತರಿದ್ದರು. ಮಹಾದೇವ ಪೂಜಾರಿ ಸ್ವಾಗತಿಸಿದರು. ನಾಗೇಶ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ಬೊಮ್ಮನಹಳ್ಳಿ ನಿರೂಪಿಸಿದರು. ಲೋಕೇಶ್ ವಂದಿಸಿದರು