ಮಂಗಳೂರು: ದೇಶವನ್ನೇ ನಿಬ್ಬೆರಗಾಗಿಸಿದ ತೆಲಂಗಾಣದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಹಾಗೂ ಅಮಾನವೀಯವಾಗಿ ಕೊಲೆಗೈದ ಘಟನೆಯನ್ನು ಹಾಗೂ ಐ.ಐ.ಟಿ ಮದ್ರಾಸ್ ವಿದ್ಯಾರ್ಥಿನಿ ಫಾತಿಮಾ ಲತೀಫಲ ಸಾಂಸ್ಥಿಕ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಸ್ರಿಯಾ ಪುತ್ತೂರು
‘ಮಹಿಳೆಯರ ಮೇಲೆ ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತಿರುವುದು ಖಂಡನೀಯ. ಸರಕಾರ ಮಹಿಳಾ ದೌರ್ಜನ್ಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ದೇಶದಲ್ಲಿ ಮಹಿಳೆಯರು ಸ್ವತಂತ್ರರಾಗಿ ಜೀವಿಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ರೂಪಿಸಬೇಕಾಗಿದೆ. ವಿದ್ಯಾರ್ಥಿನಿಯರು ದೇಶದಲ್ಲಿ ನಡೆಯುತ್ತಿರುವ ಇಂತಹ ದುರ್ಘಟನೆಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವಂತಹ ಅನಿವಾರ್ಯತೆ ಬಂದೊದಗಿದೆ ಎಂದರು.
ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುರ್ಷಿದಾ ಮಾತನಾಡಿ ಐಐಟಿ ಮದ್ರಾಸ್ ಪ್ರಕರಣವು ಇಸ್ಲಾಮೊಫೋಬಿಯಾ ಸಾಂಸ್ಥಿಕ ಹತ್ಯೆಯ ಉದಾಹರಣೆಯಾಗಿದೆ. ಇಂತಹ ಮನೋಸ್ಥಿತಿಯು ಶಿಕ್ಷಣ ರಂಗಕ್ಕೆ ಬಹಳ ಅಪಾಯಕಾರಿಯಾಗಿದೆ. ವಿದ್ಯಾರ್ಥಿನಿ ಫಾತಿಮಾ ಲತೀಫಾಳಿಗೆ ನ್ಯಾಯ ಸಿಗಬೇಕು ಹಾಗೂ ಸಾಂಸ್ಥಿಕ ಹತ್ಯೆಯ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಮುಫೀದಾ , ಅಮ್ರೀನ್ ನಾಝ್, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜಸೀರಾ ಜನ್ನತ್ ಉಪಸ್ಥಿತರಿದ್ದರು.ಫಾತಿಮಾ ಸ್ವಾಗತಿಸಿ ವಂದಿಸಿದರು.