ಬೆಂಗಳೂರು: ಕಾಂಗ್ರೆಸ್ ನಲ್ಲಿದ್ದ ಕುಟುಂಬ ರಾಜಕಾರಣವನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಪಾಳೇಯದಲ್ಲಿ ಇದೀಗ ಮತ್ತೆ ಡಿಎನ್ ಎ ರಾಜಕಾರಣ ಸದ್ದು ಮಾಡುತ್ತಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಅನಂತಕುಮಾರ ಅವರಿಗೆ ಟಿಕೆಟ್ ನೀಡಬೇಕೆಂಬ ಪ್ರಬಲ ಕೂಗು ಕೇಳಿ ಬಂದಾಗಲೂ ಅದನ್ನು ಕಡೆಗಣಿಸಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದರು. ತೇಜಸ್ವಿ ಅನಂತ ಕುಮಾರಗೆ ಟಿಕೆಟ್ ನೀಡದಿರುವುದಕ್ಕೆ ಕುಟುಂಬ ರಾಜಕಾರಣದ ನೆಪ ಹೇಳಿದ್ದರು. ಈ ವೇಳೆಯಲ್ಲಿ ರಾಜ್ಯಾಧ್ಯಕ್ಷರಾದ ಸ್ವತಃ ಯಡಿಯೂರಪ್ಪನವರಿಗೆ ಇರುಸು ಮುರುಸು ಅನುಭವಿಸಿದ್ದರು.
ಆಗ ಬಿಜೆಪಿ ಪ್ರಮುಖ ಬಿ.ಎಲ್. ಸಂತೋಷ ಅವರು ಒಂದೇ ಡಿಎನ್ ಎ ಇರುವವರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡುವುದಿಲ್ಲ ಎಂದು ಕುಟುಂಬ ರಾಜಕಾರಣವನ್ನು ವಿರೋಧಿಸಿದ್ದರು. ಆದರೆ ಇದೀಗ ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಡಾ. ಉಮೇಶ ಜಾಧವ ಪುತ್ರ ಡಾ. ಅವಿನಾಶ ಜಾಧವ ಅವರಿಗೆ ಟಿಕೆಟ್ ನೀಡಲಾಗಿದೆ.
ಇದರಿಂದಾಗಿ ಇದೀಗ ಬಿಜೆಪಿ ವಲಯದಲ್ಲಿ ಡಿಎನ್ ಎ ರಾಜಕಾರಣದ ಬಗ್ಗೆ ತೀವ್ರ ಅಪಸ್ವರ ಕೇಳಿ ಬರುತ್ತದೆ. ಬಿಜೆಪಿ ಪ್ರಮುಖ ಬಿ.ಎಲ್. ಸಂತೋಷ ಎಲ್ಲಿದ್ದಾರೆ ಎಂದು ಬಿಜೆಪಿಯವರೇ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಆಗಮಿಸಿದ್ದಾಗ ದೇವೆಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ತಮ್ಮ ಚುನಾವಣೆ ಪ್ರಚಾರದಲ್ಲಿ ತೆರಳಿದ ಬಹುತೇಕ ಕಡೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಅದೇ ರೀತಿ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಬಗ್ಗೆಯೂ ಪ್ರಧಾನಿ ಮಂತ್ರಿ ಮೋದಿ ಅವರು ದೇಶದೆಲೆಡೆ ಟೀಕಿಸಿ ಕುಟುಂಬ ರಾಜಕಾರವನ್ನು ವ್ಯಂಗ್ಯವಾಡಿದ್ದನ್ನು ಇಲ್ಲಿ ಗಮನಿಸಬಹುದು.