ಯಾದಗಿರಿ/ಸುರಪುರ: ತಾಲೂಕಿನ ಬಂಡೋಳಿ ಬಳಿಯ ತಿಂಥಣಿ ಬ್ರೀಜ್ ಮೇಲೆ ಬೆಳಗಿನ ಜಾವ ಕುರಿ ಮೇಯಿಸಲು ತೆರಳುತ್ತಿದ್ದ ಸಮಯದಲ್ಲಿ ವೇಗವಾಗಿ ಬಂದ ಮರಳಿನ ಲಾರಿ ಹರಿದು ಸುಮಾರು ಐವತ್ತೊಂದು ಕುರಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದು ಹದಿನೈದಕ್ಕು ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹುಣಸಗಿ ತಾಲೂಕಿನ ಕಮಲಾಪುರದ ವ್ಯಕ್ತಿಗೆ ಸೇರಿದ ಕುರಿಗಳೆಂದು ಹೇಳಲಾಗುತ್ತಿದ್ದು,ಕುರಿಗಳನ್ನು ಮೇಯಿಸಲು ಸೇತುವೆ ಮೇಲೆ ಹೊಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಂದ ಕೆಎ ೩೬ ಬಿ ೭೮೯೫ ನಂಬರಿನ ಟಿಪ್ಪರ್ ಕುರಿಗಳ ಮೇಲೆ ಹರಿದಿದೆ,ಇದರಿಂದ ಕುರಿಗಳು ಸ್ಥಳದಲ್ಲಿಯೆ ತುಂಡಾಗಿ ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ನಡೆದಿದೆ.ಸ್ಥಳಕ್ಕೆ ಸುರಪುರ ತಹಸೀಲ್ದಾರ ನಿಂಗಣ್ಣ ಬಿರೆದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.ಕಮಲಾಪುರ ಗ್ರಾಮದ ಕುರಿಗಾಹಿಗಳಾದ ಭೀಮಣ್ಣ ಹೊಸಮನಿ ಮತ್ತು ದ್ಯಾವಣ್ಣ ಹೊಸಮನಿ ಎಂಬುವವರಿಗೆ ಸೇರಿದ ಕುರಿಗಳಾಗಿವೆ ಎಂದು ತಿಳಿದುಬಂದಿದೆ.
ಕುರಿಗಳ ಮರಣದ ಸುದ್ದಿ ತಿಳಿದ ಸುರಪುರ ಉಪ ವಿಭಾಗದ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಹಾಗು ಸುರಪುರ ಪಿಐ ಆನಂದರಾವ್ ಭೇಟಿ ನೀಡಿ,ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಸುರಪುರ ಠಾಣೆಗೆ ತರಲಾಗಿದ್ದು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಹುಣಸಗಿ ಸಿಪಿಐ ವೀರಭದ್ರಯ್ಯ ಹಿರೇಮಠ,ಸುರಪುರ ಪಿಎಸ್‌ಐ ಶರಣಪ್ಪ,ಕೊಡೆಕಲ್ ಪಿಎಸ್‌ಐ ಬಾಷುಮಿಯಾ ಹಾಗು ಸುರಪುರ ಕಂದಾಯ ನಿರೀಕ್ಷಕ ಗುರುಬಸಪ್ಪ,ಕಕ್ಕೇರಾ ಕಂದಾಯ ನಿರೀಕ್ಷಕ ವಿಠ್ಠಲ್ ಹಾಗು ಸಿಬ್ಬಂದಿಗಳಿದ್ದರು.