ಕಲಬುರಗಿ: ಕಲಬುರಗಿ – ಬೆಂಗಳೂರು- ಮೈಸೂರು ವಿಮಾನ ಸೇವೆಗೆ ಡಿಸೆಂಬರ್ 27 ರಂದು ಚಾಲನೆ ದೊರೆಯಲಿದೆ. ಕಲಬುರಗಿ- ಬೆಂಗಳೂರು ನಡುವಿನ ಪ್ರಯಾಣದರ 2,645 ರೂ.ಗಳು ಆಗಿದೆ.
ಏರ್ ಇಂಡಿಯಾದ ಅಂಗ ಸಂಸ್ಥೆ ಆಲಯನ್ಸ್ ಏರ್ ಕಲಬುರಗಿ- ಬೆಂಗಳೂರು- ಮೈಸೂರು ನಡುವೆ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ.
ಉಡಾನ್ ಯೋಜನೆಯಡಿ 70 ಆಸನಗಳ ವಿಮಾನ ಹಾರಾಟ ನಡೆಯಲಿದೆ. ಡಿಸೆಂಬರ್ 27 ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಟಿಕೆಟ್ ಬುಕ್ ಮಾಡುವವರಿಗೆ ಉಡಾನ್ ಯೋಜನೆಯಡಿಯಲ್ಲಿ ರಿಯಾಯಿತಿ ಸಹ ದೊರೆಯಲಿದೆ.
ವಿಮಾನಯಾನ ಇಲಾಖೆ ಜೊತೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಮೂರು ತಿಂಗಳುಗಳ ತನಕ ಸ್ಟಾರ್ ಏರ್‌ವೇಸ್ ಅಲಯನ್ಸ್ ಏರ್ ಇಂಡಿಗೋ ಏರ್‌ಲೈನ್ಸ್ ವಿಮಾನಗಳಲ್ಲಿ ರಿಯಾಯಿತಿ ದೊರೆಯಲಿದೆ.
ಕಲಬುರಗಿ- ಬೆಂಗಳೂರು- ಮೈಸೂರು ನಡುವಿನ ವಿಮಾನ ಸಂಚಾರ ಆರಂಭವಾದರೆ ಕಲ್ಯಾಣ ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಇದರಿಂದಾಗಿ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂಬ ನಿರೀಕ್ಷೆಯೂ ಇದೆ.
ವೇಳಾಪಟ್ಟಿ: ವಿಮಾನ ಸಂಖ್ಯೆ: ೯೧೫೧೦ ಕಲಬುರಗಿಯಿಂದ ೧೧-೫೦ಕ್ಕೆ ಹೊರಟು ೧.೩೦ಕ್ಕೆ ಬೆಂಗಳೂರು ತಲುಪಲಿದೆ. ೨.೫೦ಕ್ಕೆ ಮೈಸೂರು ತಲುಪಲಿದೆ. ೯೧೮೯೭ ಸಂಖ್ಯೆಯ ವಿಮಾನವು ಮೈಸೂರಿನಿಂದ ೮-೩೦ಕ್ಕೆ ಹೊರಟು ೯-೧೦ಕ್ಕೆ ಬೆಂಗಳೂರು, ೧೧.೨೫ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ತಲುಪಲಿದೆ.