ಕಲಬುರಗಿ: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ತುಂಬಾ ಪ್ರಮುಖವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದರವರ ಸಂದೇಶವನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ನಗರದ ಆಳಂದ ರಸ್ತೆಯ ಆಳಂದ ಕಾಲನಿಯಲ್ಲಿರುವ ’ಬಸವೇಶ್ವರ ಕಾನ್ವೆಂಟ್ ಶಾಲೆ’ಯಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ಸ್ವಾಮಿ ವಿವೇಕಾನಂದರ ಜಯಂತಿ’ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿವೇಕಾನಂದರವರು ಧರ್ಮಕ್ಕೆ ಹೊಸ ಭಾಷ್ಯ ಬರೆದರು. ಅವರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಭಾರತದ ಭವ್ಯ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು. ಸಮಾಜದಲ್ಲಿರುವ ಬಡವ, ಅಶಕ್ತರ ಏಳ್ಗೆಗಾಗಿ ಶ್ರಮಿಸಿದರು. ಯುವ ಸಮೂಹವು ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಯುವ ಶಕ್ತಿ ಉಪಯೋಗ ಸಂಪೂರ್ಣ ಸದುಪಯೋಗವಾಗಬೇಕು. ಸಮಾಜದಿಂದ ಪಡೆದ ಜ್ಞಾನ, ಸಮಾಜದ ಒಳಿತಿಗೆ ಬಳಸಬೇಕೆಂಬ ತತ್ವದಡಿಯಲ್ಲಿ ನಮ್ಮ ಬಳಗ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದೆಯೆಂದರು.
ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ.ಮರಡಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೆ ನಿಗದಿತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆ.ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಮೌಲ್ಯಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಅನುಸರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ ಬಿ.ಮೂಲಗೆ, ಸದಸ್ಯ ನರಸಪ್ಪ ಬಿರಾದಾರ ದೇಗಾಂವ, ಉಪನ್ಯಾಸಕ ಬಸವರಾಜ ಎಸ್.ಪುರಾಣೆ, ಸಹ ಶಿಕ್ಷಕ ರಾಜಕುಮಾರ ಬಟಗೇರಿ, ಶಿಇವರಾಜ ಬಿರಾದಾರ ಸೇರಿದಂತೆ ಮತ್ತಿತರರು ಇದ್ದರು.