ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ ೫, ೬ ಮತ್ತು ೭ ರಂದು ಜರುಗಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಸಾಹಿತ್ಯ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ವೇದಿಕೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಇ.ಎಸ್.ಐ. ಕಟ್ಟಡ ಹಿಂಭಾಗದ ಮುಖ್ಯ ವೇದಿಕೆ ಸ್ಥಳದ ಕಾರ್ಯಕ್ಕೆ ನಡೆದ ಗುದ್ದಲಿ ಪೂಜೆಯನ್ನು ಅಭಿಜಿತ್ ಲಗ್ನ ಮುಹೂರ್ತದಲ್ಲಿ ಬೆಳಿಗ್ಗೆ ೧೧.೫೦ ರಿಂದ ಮಧ್ಯಾಹ್ನ ೧೨.೧೦ ಗಂಟೆ ವರೆಗೆ ನಡೆಯಿತು. ಪುರೋಹಿತರಾದ ಭದ್ರಯ್ಯ ಸ್ವಾಮಿ ಮತ್ತು ಸೂಗುರೇಶ್ವರ ಸ್ವಾಮಿ ಅವರು ವಿಧಿ-ವಿಧಾನದಂತೆ ಪೂಜಾ ಕಾರ್ಯ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಮತ್ತು ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಸಮ್ಮೇಳನ ವೇದಿಕೆ ಸೇರಿದಂತೆ ಇನ್ನಿತರ ಸಿವಿಲ್ ಕಾಮಗಾರಿಗಳಿಗೆ ಇಂದು ಅಧಿಕೃತ ಚಾಲನೆ ನೀಡಿದೆ. ಮುಖ್ಯ ವೇದಿಕೆ ಸುಮಾರು ೨೫೦೦೦ ಸಾವಿರ ಜನರು ಕುಳಿತುಕೊಳ್ಳುವಂತೆ ಪೆಂಡಾಲ್ ಹಾಕಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿಣೆರಡು ಸಮನಾಂತರ ವೇದಿಕೆ ಸಹ ನಿರ್ಮಿಸಲಾಗುತ್ತಿದೆ ಎಂದರು.
ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಲಿದೆ. ಇದರ ಜೊತೆಯಲ್ಲಿ ಸ್ಥಳೀಯವಾಗಿ ಹಣ ಸಂಗ್ರಹಿಸಬೇಕಾಗಿರುತ್ತದೆ. ಹಣ ದೇಣಿಗೆ ಕೊಡಿ ಎಂದು ಪರರಿಗೆ ಕೇಳುವ ಮುನ್ನ ನಾನು ಈಗಾಗಲೆ ಒಂದು ತಿಂಗಳ ವೇತನ ೯೭೪೬೧/- ರೂ. ಈಗಾಗಲೆ ಸಮ್ಮೇಳನಕ್ಕೆ ನೀಡಿದ್ದೇನೆ. ಇದಕ್ಕೆ ಪ್ರೇರಿತರಾಗಿ ಗುರುವಾರ ಸ್ಥಳೀಯ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯವರು ೫೧ ಸಾವಿರ ರೂ. ಮತ್ತು ಗ್ರಾಮ ಲೆಕ್ಕಾಧಿಕಾರಿ ಗುರುಶಾಂತಪ್ಪ ಗಾಳೆ ಅವರು ೧೧ ಸಾವಿರ ರೂ. ದೇಣಿಗೆ ನೀಡಿದ್ದಾರೆ. ಕಲಬುರಗಿ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೂ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವಂತೆ ಕೋರಲಾಗಿದೆ. ಜಿಲ್ಲೆಯ ಎಲ್ಲಾ ಉದ್ಯಮಿದಾರರು, ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಶಿಕ್ಷಣ-ಸಂಸ್ಥೆಗಳು ಸ್ವಯಂಪ್ರೇರಿತರಾಗಿ ದೇಣಿಗೆ ನೀಡುವಂತೆ ಕರೆ ನೀಡಲಾಗಿದ್ದು, ನುಡಿ ಹಬ್ಬಕ್ಕೆ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ ಸುಮಾರು ೩೦ ಎಕರೆ ಪ್ರದೇಶದಲ್ಲಿ ಮುಖ್ಯ ವೇದಿಕೆ ನಿರ್ಮಾಣ ಮಡಲಾಗುತ್ತಿದೆ. ಅಂದಾಜು ೩೨೫ ಸಾವಿರ ಜನ ನೊಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ನೊಂದಣಿ ಪ್ರತಿನಿಧಿ, ವಿವಿಐಪಿ, ಪತ್ರಕರ್ತರು, ಸಾರ್ವಜನಿಕರಿಗೆ ಪ್ರತ್ಯೇಕ ಗ್ಯಾಲರಿ ಇರಲಿದೆ. ಕಲಬುರಗಿ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನ ಐತಿಹಾಸಕವಾಗಿರಲಿದ್ದು, ಈ ಸಂಬಂಧ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು.
ವಿಧಾನಸಭೆಯ ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ಕನೀಸ್ ಫಾತಿಮಾ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕಲಬುರಗಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಸೋಮಶೇಖರ್ ಸೇರಿದಂತೆ ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯರು, ಸಾಹಿತಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.