ಕಲಬುರಗಿ: ಬೈಲೂರು, ಮುಂಡರಗಿ ಮಠದ ಪೂಜ್ಯ ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಬಸವಾದಿ ಶರಣರ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸುವ ಮೂಲಕ ಜನರ ಮನದ ಮೈಲಿಗೆ ತೊಳೆಯುತ್ತಿರುವ ಸ್ವಾಮೀಜಿಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ದಾವಣಗೆರೆಯಿಂದ ಅಂಚೆ ಮೂಲಕ ಪೂಜ್ಯರ ಹೆಸರಲ್ಲಿ ಬೈಲೂರಿನ ಮಠಕ್ಕೆ ಈ ಪತ್ರ ಬಂದಿದ್ದು, ಅದರಲ್ಲಿ ಅಸುರಿ ಸ್ವಾಮಿ ಎಂದು ಬರೆದು ನಿಮ್ಮನ್ನು ಸೇರಿದಂತೆ ಇತರ ೧೫ ಜನರಿಗೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ಪತ್ರ ಬರೆದಿರುವವರನ್ನಜ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಹಿರಂಗವಾಗಿಯೇ ಪತ್ರ ಬರೆದು ಕೊಲೆ ಬೆದರಿಕೆ ಹಾಕಿರುವುದರಿಂದ ಬಸವಾನುಯಾಯಿಗಳಿಗೆ ತೀವ್ರ ಆತಂಕವುಂಟಾಗಿದೆ. ಈಗಾಗಲೇ ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ ಅವರನ್ನು ಕಳೆದುಕೊಂಡ ಲಿಂಗಾಯತ ಸಮಾಜ ತೀವ್ರ ಆತಂಕದಲ್ಲಿ ಮುಳುಗಿದೆ. ಬೆದರಿಕೆ ಹಾಕಿದವರನ್ನು ಪತ್ತೆ ಹಚ್ಚಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.
ಪ್ರಭುಲಿಂಗ ಮಹಾಗಾಂವಕರ, ಆರ್.ಜಿ. ಶೆಟಗಾರ, ಸೋಮಣ್ಣ ನಡಕಟ್ಟಿ, ರವೀಂದ್ರ ಶಾಬಾದಿ, ಬಸವರಾಜ ಮೊರಬದ ಇತರರಿದ್ದರು.