ಸಾಹಿತ್ಯ ಸಮ್ಮೇಳನದ ನಂತರ ಸಮಸ್ಯಾತ್ಮಕ ಬಡಾವಣೆಗಳಿಗೆ ಭೇಟಿ: ಪಾಲಿಕೆ ಆಯುಕ್ತ ಪಾಂಡ್ವೆ ಭರವಸೆ

0
114

ಕಲಬುರ್ಗಿ: ನಗರದಲ್ಲಿ ಫೆಬ್ರವರಿ ೫,೬ ಮತ್ತು ೭ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ಶಕ್ತಿನಗರ್ ಸೇರಿದಂತೆ ನಗರದ ಸಮಸ್ಯಾತ್ಮಕ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಅವರು ಇಲ್ಲಿ ಭರವಸೆ ನೀಡಿದರು.

ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಅಧ್ಯಕ್ಷ ಪ್ರಭುಲಿಂಗ್ ಕೆ. ಮಹಾಗಾಂವಕರ್ ಅವರು ನಿಯೋಗದ ಮೂಲಕ ಶುಕ್ರವಾರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಭೇಟಿ ಮಾಡಿ ಬೇಡಿಕೆಗಳ ಮನವಿ ಪತ್ರ ಅರ್ಪಿಸಿದಾಗ ಬೇಡಿಕೆಗಳನ್ನು ಪರಿಶೀಲಿಸಿ ಬಡಾವಣೆಗೆ ಫೆಬ್ರವರಿ ೮ರ ನಂತರ ಭೇಟಿ ನೀಡುವುದಾಗಿ ತಿಳಿಸಿದರು.

Contact Your\'s Advertisement; 9902492681

ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಚರಂಡಿಗಳ ನಿರ್ವಹಣೆ ಅಸಮರ್ಪಕವಾಗಿದೆ. ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಮುಖ್ಯ ರಸ್ತೆಗಳ ಪಕ್ಕ ಇರುವ ಪಾದಾಚಾರಿ ರಸ್ತೆಗಳ ಮೇಲೆ ಬೀದಿ ವ್ಯಾಪಾರಿಗಳು ಅತಿಕ್ರಮಣ ಮಾಡಿದ್ದು, ತೀವ್ರ ತೊಂದರೆ ಆಗಿದೆ. ಬಯಲು ಸ್ಥಳಗಳಲ್ಲಿ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಇಂತಹ ಸಮಸ್ಯೆಗಳಿಂದಾಗಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮಹಾಗಾಂವಕರ್ ಅವರು ಆಯುಕ್ತರಿಗೆ ಹೇಳಿದರು.

ಈಗಾಗಲೇ ಕ್ಲಬ್ ಹಿಂದಿನ ಪಾಲಿಕೆಯ ಆಯುಕ್ತರಿಗೂ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದೇವೆ. ಶಕ್ತಿನಗರದಿಂದ ದತ್ತ ನಗರಕ್ಕೆ ಹೋಗುವ ರೈಲ್ವೆ ಒಳಸೇತುವೆಯ ಮಾರ್ಗವು ತಗ್ಗು, ದಿನ್ನೆಯಿಂದ ಕೂಡಿದ್ದು, ಸಮತಟ್ಟು ರಸ್ತೆ ನಿರ್ಮಿಸಲು ಬೇಡಿಕೆ ಸಲ್ಲಿಸಿದರೂ ಸಹ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಶಕ್ತಿನಗರ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ಯಾನವನಗಳಿದ್ದು, ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಆಟೋಟಗಳ ಸೌಲಭ್ಯಗಳನ್ನು ಉದ್ಯಾನವನದಲ್ಲಿ ಕಲ್ಪಿಸಬೇಕು. ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.

ಬಯಲು ಪ್ರದೇಶದಲ್ಲಿ ತ್ಯಾಜ್ಯ ಹಾಕುವುದು ಒಂದು ಅಪರಾಧ ಎಂದು ಹೈಕೋರ್ಟ್ ತೀರ್ಪು ಕೊಟ್ಟಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಸ್ಥಳವಾದರೂ ಸಹ ಅಲ್ಲಿ ತ್ಯಾಜ್ಯ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು. ಬಡಾವಣೆಗಳಲ್ಲಿ ಕಸವಿಲೇವಾರಿ ಆಗದೇ ಅವ್ಯವಸ್ಥೆಯ ಆಗರವಾಗಿರುವ ಕುರಿತು ನಗರದ ಹೃದಯಭಾಗದಲ್ಲಿರುವ ಜಗತ್ ವೃತ್ತದಲ್ಲಿನ ಬಸವೇಶ್ವರ್ ಪ್ರತಿಮೆಯ ಬಳಿ ತ್ಯಾಜ್ಯ ಹಾಕಿರುವುದನ್ನು ಭಾವಚಿತ್ರದೊಂದಿಗೆ ತೋರಿಸಿದ ಮಹಾಗಾಂವಕರ್ ಅವರು, ಕೂಡಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಪಾಲಿಕೆಯ ಆಯುಕ್ತರು ಮನವಿ ಸ್ವೀಕರಿಸಿ, ಸಾಹಿತ್ಯ ಸಮ್ಮೇಳನದ ತಯಾರಿಯಲ್ಲಿಯೇ ಪಾಲಿಕೆಯ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದೇವೆ. ಫೆಬ್ರವರಿ ೮ರ ನಂತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲಾಗುವುದು. ನಗರದ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಅನುದಾನ ಕ್ರೋಢಿಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುದಾನ ಪಡೆದು ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ನಳಿನಿ ಮಹಾಗಾಂವಕರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಬೇಡಿಕೆಗಳ ಕುರಿತು ಖುದ್ದಾಗಿ ಭೇಟಿ ನೀಡಲು ಪಾಲಿಕೆಯ ಸಹಾಯವಾಣಿಗೆ ಸಂಪರ್ಕಿಸಿದಾಗ ಫೆಬ್ರವರಿ ೨ರವರೆಗೆ ಆಯುಕ್ತರು ಲಭ್ಯ ಇರದ ಕುರಿತು ಮಾಹಿತಿ ನೀಡಲಾಯಿತು. ಈಗ ನೋಡಿದರೆ ಆಯುಕ್ತರು ಕಚೇರಿಯಲ್ಲಿ ಇರುವುದು ಗೊತ್ತಾಯಿತು. ತಪ್ಪು ಮಾಹಿತಿಯನ್ನು ಸಹಾಯವಾಣಿಯಿಂದ ಕೊಡಬಾರದು ಎಂದು ಕೋರಿದರು.

ಆಯುಕ್ತ ರಾಹುಲ್ ಪಾಂಡ್ವೆ ಅವರು ಪ್ರತಿಕ್ರಿಯಿಸಿ, ನಾನು ಫೆಬ್ರವರಿ ೨ರವರೆಗೆ ರಜೆಯಲ್ಲಿ ಇರುವುದು ನಿಜ. ಆದಾಗ್ಯೂ, ಸಮ್ಮೇಳನದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸತ್ಯವನ್ನು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು. ನಿಯೋಗದಲ್ಲಿ ಖಜಾಂಚಿಯೂ ಆದ ನ್ಯಾಯವಾದಿ ಎಂ.ಎಂ.ಎಲ್. ಅಲಂಕಾರ್, ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಆರ್. ಚಿಗೋನ್, ಎಂ.ವಿ. ಕಾಂಬಳೆ, ಸಿ.ಎಸ್. ಬಗಲಿ, ಸಿ.ಎ. ಗಡವಾಲ್, ಯಶವಂತ್ ಸಿಂಧೆ, ಕೆ.ಬಿ. ಭಂಕೂರ್, ಸಿದ್ರಾಮಪ್ಪ ನೀಲೂರ್, ಬಸವರಾಜ್ ಬಿರಾದಾರ್, ಕಮಲಾಕರ್ ಎಲಕಪಳ್ಳಿ, ಶಿವಪ್ಪ ದೊಡ್ಡಮನಿ, ಬಸವರಾಜ್ ಚಿನಿವಾರ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here