ಸುರಪುರ: ಇಂದು ಅನೇಕ ಕಲೆಗಳು ಮಾಯವಾಗುತ್ತಿವೆ.ಅವುಗಳಲ್ಲಿ ನಾಟಕ ಕಲೆಯು ಒಮದಾಗಿದ್ದು,ನಾಟಕಗಳು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಸಂದೇಶ ನೀಡುತ್ತವೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ(ತಾತಾ) ಮಾತನಾಡಿದರು.
ತಾಲೂಕಿನ ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಹಾಗು ಶ್ರೀಗಿರಿ ಮಠದ ಬಸವಲಿಂಗ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬಾಪೂಜಿ ಸ್ವಯಂ ಸೇವಾ ಸಂಸ್ಥೆಯ ಸಹಕಾರದಲ್ಲಿ ಉಚಿತ ನಾಟಕೋತ್ಸವ ಕಾರ್ಯಕ್ರಮದಲ್ಲಿ ದಾರಿ ತಪ್ಪಿದ ನಾರಿ ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕಳೆದ ಕೆಲ ವರ್ಷಗಳ ಹಿಂದೆ ನಾಟಕಗಳು ಜನರನ್ನು ಸೆಳೆಯುತ್ತಿದ್ದವು.ಆದರೆ ಇಂದು ಜನರ ಮನಸ್ಥಿತಿ ಬದಲಾಗಿದ್ದು ನಾಟಕಗಳು ಮಾಯವಾಗುತ್ತಿವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಗಿರಿ ಮಠದ ಬಸವಲಿಂಗ ದೇವರು ಮಾತನಾಡಿ,ಜಾತ್ರೋತ್ಸವದ ಅಂಗವಾಗಿ ಬಾಪೂಜಿ ಸ್ವಯಂ ಸೇವಾ ಸಂಸ್ಥೆಯು ನಾಟಕವನ್ನು ಹಮ್ಮಿಕೊಂಡು ಜನರಲ್ಲಿ ಕಲೆಯ ಅಭಿಮಾನ ಮೂಡಿಸುವ ಹಾಗು ಇಂದು ನಾಟಕಗಳು ನೋಡಲು ಸಿಗುವುದು ಅಪರೂಪವಾಗಿರುವಾಗ ಉಚಿತ ಪ್ರದರ್ಶನ ನಡೆಸುವ ಮೂಲಕ ಸಂತೋಷವನ್ನುಂಟುಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಅನೇಕ ಜನ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಬಲಭೀಮನಾಯಕ ಬೈರಿಮಡ್ಡಿ,ಶ್ರೀನಿವಾಸ ನಾಯಕ ದರಬಾರಿ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ನರಸಿಂಹಕಾಂತ ಪಂಚಮಗಿರಿ,ರವಿ ನಾಯಕ ಬೈರಿಮಡ್ಡಿ,ಯಲ್ಲಪ್ಪ ಕಾಡ್ಲೂರ,ನಿಂಗಪ್ಪ ನಾಯಕ ಬಿಜಾಸಪುರ,ಶಿವು ಕಲಕೇರಿ,ರಂಗನಗೌಡ ದೇವಿಕೇರಾ,ದಾನಪ್ಪ ಲಕ್ಷ್ಮೀಪುರ,ಚಂದ್ರಶೇಖರ ಡೊಣೂರ ಸೇರಿದಂತೆ ಅನೇಕರಿದ್ದರು.ಮಲ್ಲಿಕಾರ್ಜುನ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು,ಸಂಸ್ಥೆಯ ಅಧ್ಯಕ್ಷ ಶರಣು ಅನ್ಸೂರ ವಂದಿಸಿದರು.