ಕಲ್ಯಾಣ ಕರ್ನಾಟಕದ ಜನಮನ; ಸ್ಥಿತಿ-ಗತಿ

0
181

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹೈದರಾಬಾದ್ ಕನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಗುರುತಿಸಲಾಗಿದೆ. ಸುಮಾರು ಎರಡು ಸಾವಿರ ಇತಿಹಾಸವುಳ್ಳ ಈ ಪ್ರದೇಶವನ್ನು ಈ ಹಿಂದೆ ಮೌರ್ಯ, ಶಾತವಾಹನ, ಬನವಾಸಿ ಕದಂಬರು, ಬದಾಮಿ ಚಾಲೂಕ್ಯ, ರಾಷ್ಟ್ರಕೂಟ, ಕಲ್ಯಾಣದ ಚಲೂಕ್ಯರು, ಬಹಮನಿ ಸುಲ್ತಾನರು, ಆದಿಲ್ ಶಾಹಿಗಳು, ಹೈದರಾಬಾದ್ ನಿಜಾಮರು ಆಳ್ವಿಕೆ ನಡೆಸಿದ್ದಾರೆ. ಈ ರಾಜ ಮನೆತನದವರು ಪರಾಕ್ರಮಿಗಳಾಗಿದ್ದರು. ಕೆಲ ರಾಜಮನೆತನದವರು ಕಲಿಗಳ ಜೊತೆ ಕವಿಗಳೂ ಆಗಿದ್ದರು.

ಮೌರ್ಯ ಸಾಮ್ರಾಜ್ಯರ ಕಾಲದಲ್ಲಿ ಈ ಪ್ರದೇಶದ ವಿವಿಧ ಭಾಗಗಳಲ್ಲಿ ದೊರೆತ ಅಶೋಕನ ಶಿಲಾ ಶಾಸನಗಳು, ರಾಷ್ಟ್ರಕೂಟರ ಕಾಲದ ಕನ್ನಡದ ಮೊಟ್ಟ ಮೊದಲ ಉಪಲಬ್ದ ಕೃತಿ ಕವಿರಾಜ ಮಾರ್ಗ, ಕಲ್ಯಾಣ ಚಾಲೂಕ್ಯರ ಕಾಲದ ವಾಸ್ತು ಶಿಲ್ಪ, ವಿಜ್ಞಾನೇಶ್ವರನ ಮಿತಾಕ್ಷರ, ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಇಂದಿನ ಪಾರ್ಲಿಮೆಂಟ್ ಹೋಲುವ ಅನುಭವ ಮಂಟಪವೆಂಬ ಪ್ರಜಾ ಸಂಸತ್ ಭವನವನ್ನು ೧೨ನೇ ಶತಮಾನದಲ್ಲಿಯೇ ಸ್ಥಾಪಿಸಿದ ಬಸವಣ್ಣ, ನಿಜಾಮರು ಆಡಳಿತದಲ್ಲಿ ಬಾವಿಗಳನ್ನು ತೋಡಿಸುವುದು, ಕೆರೆ, ರಸ್ತೆಗಳ ನಿರ್ಮಾಣದಂತಹ ಜನಪರ ಕಾರ್ಯಗಳೆಲ್ಲವೂ ಈ ಭಾಗದ ಕೀರ್ತಿ ಹೆಚ್ಚಿಸುವಂತಿವೆ. ಇದೆಲ್ಲದಕ್ಕೂ ಮಿಗಿಲಾಗಿ ಸೂಫಿ, ಶರಣ, ದಾಸ ಪರಂಪರೆಯ ನಾಡು ಎಂಬ ಕೀರ್ತಿಗೆ ಭಾಜನವಾಗಿದ್ದು ಈ ಭಾಗದ ವಿಶೇಷವಾಗಿದೆ.

Contact Your\'s Advertisement; 9902492681

ಸುಮಾರು ವರ್ಷಗಳವರೆಗೆ ಆಡಳಿತ ನಡೆಸಿದ ನಿಜಾಮರು ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರಾದರೂ ಶಿಕ್ಷಣ, ಕೈಗಾರಿಕೆ, ನೀರಾವರಿಯಿಂದ ಈ ಭಾಗ ವಂಚಿತಗೊಂಡಿದ್ದರಿಂದ ಅನಕ್ಷರತೆ, ಬಡತನ, ಉದ್ಯೋಗ, ಅನ್ನ-ಆಹಾರ ಮುಂತಾದವುಗಳ ಕೊರತೆ ಉಂಟಾದವು. ಕನಿಷ್ಟ ಮೂಲಸೌಕರ್ಯಗಳಾದ ರಸ್ತೆ, ಆಸ್ಪತ್ರೆ, ಕುಡಿಯುವ ನೀರು, ಬಸ್ ಸೌಕರ್ಯ ಒದಗಿಸುವಲ್ಲಿ ನಮ್ಮನ್ನಾಳಿದ ಸರ್ಕಾರಗಳು ವಿಫಲವಾದವು. ಹೀಗಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿಯಿತು. ಅಂತೆಯೇ ಈ ಭಾಗ ಪ್ರಗತಿಯಲ್ಲಿ ಹಿಂದುಳಿಯುವಂತಾಯಿತು.

ಹಾಗೆ ನೋಡಿದರೆ ಈ ಭಾಗದ ಜನರು ತುಂಬಾ ಹೃದಯವಂತರು. ಆದರಾತಿಥ್ಯಕ್ಕೆ ಹೇಳಿ ಮಾಡಿಸಿದ ಜನ. ಆದರೆ ಗುಲಾಮಗಿರಿಗೆ ಒಗ್ಗಿಕೊಂಡಿರುವ ಮನಸ್ಸೋ ಅಥವಾ ಇನ್ನಾವ ಕಾರಣವೋ ಗೊತ್ತಿಲ್ಲ. ಆಡಳಿತ ನಡೆಸುವವರ ವಿರುದ್ಧ ಅನೇಕ ವರ್ಷಗಳಿಂದ ಚಕಾರ ಎತ್ತಲಿಲ್ಲ. ಹೀಗಾಗಿ ನಮ್ಮನ್ನಾಳುವವರ ತಾಳಕ್ಕೆ ತಕ್ಕಂತೆ ಕುಣಿದು ತಮ್ಮ ಕಾಲ್ಗೆಜ್ಜೆಯನ್ನು ಸಹ ಕಳೆದುಕೊಂಡಿದ್ದಾರೆ ಈ ಭಾಗದ ಜನರು. ಯಾರದೋ ತಾಳಕ್ಕೋ, ಇನ್ನಾವುದೋ ಸಿದ್ಧಾಂತಕ್ಕೆ ಜೋತು ಬಿದ್ದು ತಮ್ಮತನವನ್ನು ಕಳೆದುಕೊಂಡು ಇನ್ನೊಬ್ಬರ ಆಶ್ರಯ, ಆಸರೆ ಬಯಸುವಂಥ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಜನ ಜೀವನ ಸುಧಾರಿಸುವ, ಉತ್ತಮಗೊಳಿಸುವ ಕೆಲಸ ನಮ್ಮನ್ನಾಳಿದ ಯಾವ ರಾಜ ಮಹಾರಾಜರು ಮತ್ತು ಪ್ರಜಾಪ್ರಭುತ್ವ ಸರ್ಕಾರಗಳು ಮಾಡಲಿಲ್ಲ ಎಂಬುದು ಅತ್ಯಂತ ವಿಷಾದದ ಸಂಗತಿ.

ನಮ್ಮ ಇಡೀ ಭಾರತ ದೇಶಕ್ಕೆ ೧೯೪೭, ಆಗಸ್ಟ್-೧೭ರಂದು ಸ್ವಾತಂತ್ರ್ಯ ದೊರೆತಿದ್ದರೆ, ಹೈದರಾಬಾದ್ ಸಂಸ್ಥಾನದ ಆಳ್ವಿಕೆಯಲ್ಲಿದ್ದ ಈ ನಮ್ಮ ಪ್ರದೇಶಕ್ಕೆ ೧೯೪೮, ಸೆಪ್ಟೆಂಬರ್-೧೮ರಂದು ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ಪಡೆಯುವಲ್ಲಿ ಒಂದು ವರ್ಷ ಒಂದು ತಿಂಗಳು ತಡವಾಗಿ ಪಡೆದ ಈ ಭಾಗ ಸಹಜವಾಗಿಯೇ ನಿರ್ಲಕ್ಷ್ಯಕ್ಕೆ ಒಳಪಟ್ಟಿತು. ಹೈದರಾಬಾದ್ ನಿಜಾಮರ ಆಡಳಿತದಿಂದ ಮುಕ್ತರಾದೆವು. ಆದರೆ ದಾಸ್ಯದಿಂದ ಅಲ್ಲ. ಈ ಪ್ರದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸರ್ಕಾರ ಮತ್ತು ಮುಂದುವರಿದ ಪ್ರದೇಶದಗಳಿಂದ ಶೋಷಣೆಯನ್ನು, ಅಸಮಾನತೆಯನ್ನು ಅನುಭವಿಸುತ್ತ ಬಂದಿರುವುದು ಕಣ್ಣ ಮುಂದಿನ ಸತ್ಯ.

ಭಾಷಾವಾರು ಪ್ರಾಂತ ರಚನೆಯ ನಂತರ ಕರ್ನಾಟಕ ರಾಜ್ಯ ಪುನರ್ ನಾಮಕರಣ ಮಾಡಿ ಆಡಳಿತ ಸುಸೂತ್ರವಾಗಿ ನಡೆಸಲು ಗುಲ್ಬರ್ಗ, ಬೆಳಗಾವಿ, ಮೈಸೂರು, ಬೆಂಗಳೂರು ಹೀಗೆ ನಾಲ್ಕು ಕಂದಾಯ ವಿಭಾಗಗಳನ್ನಾಗಿ ಮಾಡಲಾಯಿತು. ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕಪ್ಪಳ, ಬಳ್ಳಾರಿಗಳನ್ನು ಒಳಗೊಂಡ ಪ್ರದೇಶವನ್ನು ಗುಲ್ಬರ್ಗ ವಿಭಾಗ ಎಂದು ಗುರುತಿಸಲಾಯಿತು. ಮೈಸೂರು ರಾಜ್ಯದ ಅಡಿಯಲ್ಲಿ ವಿಲೀನಗೊಂಡ ಈ ಭಾಗವು ಮೈಸೂರು ವಿಭಾಗದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂದು ಈ ಭಾಗದ ಜನರು ಕನಸು ಕಂಡಿದ್ದರು. ಆದರೆ ಅದು ಈವರೆಗೆ ನನಸಾಗದಿರುವುದು ನಮ್ಮ ಭಾಗದ ದುರಂತ ಎಂದು ಹೇಳಲೇಬೇಕಾಗುತ್ತದೆ.

ಸ್ಥಿತಿ-ಗತಿ: ೧೩೪೭ರ ಬಹುಮನಿ ರಾಜ್ಯ ಸ್ಥಾಪನೆಯಿಂದ ಕಾಲಕ್ರಮೇಣ ನಿಜಾಮರ ಆಳ್ವಿಕೆಯಿಂದ ಈ ಭಾಗದ ಸಮಾಜಿಕ ಸ್ಥಿತಿ-ಗತಿ ಹಿಂದುಳಿದಿರುವಿಕೆಯನ್ನು ಗುರುತಿಸುತ್ತದೆ. ಅಂದಿನ ಮೈಸೂರು ರಾಜ್ಯದಿಂದ ಇಂದಿನ ಕರ್ನಾಟಕ ರಾಜ್ಯದವರೆಗೆ ಈ ಭಾಗವನ್ನು ನಿರ್ಲಲಕ್ಷಿಸಿರುವುದನ್ನು ಇಲ್ಲಿನ ಸಾಮಾಜಿಕ ಜ್ವಲಂತ ಸಮಸ್ಯೆಗಳೇ ಸಾಕ್ಷಿ ಹೇಳುತ್ತವೆ. ಬಡತನ, ನಿರುದ್ಯೋಗ, ಅಪೌಷ್ಟಿಕೆತ, ಕೃಷಿ, ಕೂಲಿ ಕಾರ್ಮಿಕರ ಸಮಸ್ಯೆ, ಗುಳೆ ಹೋಗುವುದು, ಮೂಢನಂಬಿಕೆ, ಮಕ್ಕಳ ಮಾರಾಟ ಇನ್ನೂ ಮುಂತಾದ ಸಮಸ್ಯೆಗಳು ಜೀವಂತವಾಗಿವೆ. ಸಾಮಾಜಿಕ ಅಂತರಗಳಾದ ಮುಂದುವರೆದ-ಹಿಂದುಳಿದ ಅಂತರದಲ್ಲಿ ರಾಜ್ಯದ ಅತ್ಯಂತ ಹಿಂದುಳಿದ ೩೯ ತಾಲ್ಲೂಕುಗಳ ಪೈಕಿ ೨೧ ತಾಲ್ಲೂಕುಗಳು ಈ ಪ್ರದೇಶಕ್ಕೆ ಒಳಪಟ್ಟಿವೆ ಎಂದು ಉನ್ನತಾಧಿಕಾರಿಗಳ ಸಮಿತಿ ಹೇಳುತ್ತದೆ.

ನೈಸರ್ಗಿಕವಾಗಿ ಸಂಪತ್ತಿನ ಕಣಜವಾಗಿರುವ ಇಲ್ಲಿ ವರಮಾನ, ಮಾನವ ಸಂಪನ್ಮೂಲದ ಅಭಿವೃದ್ಧಿಯ ಮಾನಕದಲ್ಲಿಯೂ ಹಿಂದುಳಿದಿರುವುದನ್ನು ಅಂಕಿ ಸಂಖ್ಯೆಗಳಿಂದ ತಿಳಿದು ಬರುತ್ತದೆ. ಈ ಭಾಗದಲ್ಲಿ ಇನ್ನೂ
ಬಡತನ-ಕಡು ಬಡತನ ಇರುವುದನ್ನು ಗುರುತಿಸಬಹುದಾಗಿದೆ. ಹೀಗೆ ಈ ಭಾಗ ಆರ್ಥಿಕ ಮುಗ್ಗಟ್ಟಿನಿಂದ ಕೂಡಿದೆ. ಸಾಕ್ಷರತೆ ಪ್ರಗತಿ ಸಾಧಿಸದೆ ಮಾನವ ಪ್ರಗತಿ ಸಾಧ್ಯವಿಲ್ಲ ಎಂಬ ಮಾತಿನಿಂತೆ ಸಾಕ್ಷರತಾ ಪ್ರಮಾಣ ಹಾಗೂ ಪುರುಷ-ಮಹಿಳೆ ಎಂಬ ಲಿಂಗ ತಾರತಮ್ಯ ಕಂಡು ಬರುತ್ತದೆ.

ಅಂತೆಯೇ ಈ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ ೩೭೧ನೇ ಕಲಂ ತಿದ್ದುಪಡಿಯಾಗಬೇಕು ಎಂಬ ಕೂಗು ಕೇಳಿ ಬಂದಿತು. ಅನೇಕ ಗಣ್ಯರು, ಕನ್ನಡಪರ ಸಂಘಟನೆಗಳ ಪ್ರಮುಖರು ಹೋರಾಟ ನಡೆಸಿದರು. ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯ ಪ್ರದರ್ಶನದಿಂದಾಗಿ ಈ ಭಾಗಕ್ಕೆ ವಿಶೇಷ ಸೌಲತ್ತು ನೀಡುವ ಸಂವಿಧಾನದ ಆರ್ಟಿಕಲ್ ೩೭೧ (ಜೆ) ಜಾರಿಯಾಗಿ ಅನುಷ್ಠಾನಗೊಂಡಿತು. ಆದರೇನಂತೆ? ಅನುಷ್ಠಾನದಲ್ಲಿನ ವಿಳಂಬ ನೀತಿಯಿಂದಾಗಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿ, ನೇಮಕಾತಿ ಇಂದಿಗೂ ಗೊಂದಲಕ್ಕೀಡಾಗಿರುವುದು ಈ ಭಾಗದ ದುರ್ದೈವ.

ನಂಜುಂಡಪ್ಪ ವರದಿಯ ಶಿಫಾರಸಸ್ಸಿನಂತೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ಸರ್ಕಾರದ ಈ ಅನುದಾನದಲ್ಲಿ ಭಾಗದ ಶಿಕ್ಷಣಮಟ್ಟ, ರಸ್ತೆ ಸುಧಾರಣೆ ಕಾರ್ಯ ಕೂಡ ನಡೆಯುತ್ತಿವೆ. ಆದರೆ ಇದೆಲ್ಲವೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿ ಪರಿಣಮಿಸಿದೆ. ನಿಜಾಮರ ದಾಸ್ಯದ ಸಂಕೇತವೆನಿಸಿದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಇದೀಗ ಕಲ್ಯಾಣ ಕರ್ನಾಟಕವೆಂದು ಸರ್ಕಾರ ಮರು ನಾಮಕರಣ ಮಾಡಿರುವುದು ಸ್ವಾಗತಾರ್ಹ ವಿಷಯ. ಆದರೆ ಉಪ್ಪಿನ ಡಬ್ಬಿಗೆ ಸಕ್ಕರೆ ಡಬ್ಬಿ ಎಂದು ಮರು ನಾಮಕರಣ ಮಾಡಿದರೆ ಏನು ಪ್ರಯೋಜನ? ಆಡಳಿತ ನಡೆಸುವ ಸರ್ಕಾರಗಳು ಈ ಭಾಗಕ್ಕೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಯೋಜನೆಗಳೆಲ್ಲವೂ ಕಾರ್ಯಗತಗೊಳ್ಳುವಂತಾಗಬೇಕು.

-ಶಿವರಂಜನ್ ಸತ್ಯಂಪೇಟೆ

ವಿಳಾಸ: ಬಸವ ಮಾರ್ಗ, ಪ್ಲಾಟ್ ನಂ. ೧೯
ನೃಪತುಂಗ ಕಾಲನಿ, ಶಹಾಬಾದ್ ರಸ್ತೆ
ಅಂಚೆ: ಕಲಬುರಗಿ-೫೮೫೧೦೫
ಮೊಬೈಲ್: ೯೪೪೮೨೦೪೫೪೮

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here