12ನೇ ಶತಮಾನದಲ್ಲಿ ನಡೆದ ವಚನ ಚಳವಳಿ ಸಮಾಜೋದ್ಧಾರ್ಮಿಕವಾದ ಒಂದು ವಿನೂತನ ಚಳವಳಿ. ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೂಢನಂಬಿಕೆ, ಕಂದಾಚಾರಗಳನ್ನು ನಿವಾರಿಸುವ ಮೂಲಕ ಬದುಕಿನ ಸಾರ್ಥಕತೆಯ ಮಾರ್ಗ ತೋರಿದ ವಿಶಿಷ್ಟ ಚಳವಳಿ. ಮನುಷ್ಯ ಬದುಕಿಗೆ ಕಾಯಕ-ದಾಸೋಹ ಎಂಬ ಎರಡು ಹೊಸ ಮಂತ್ರಗಳನ್ನು ಬೋಧಿಸುವುದರ ಜೊತೆಗೆ ಹಾಗೆಯೇ ಬದುಕಿದ ಶರಣರು ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಶ್ರೀಮಂತಗೊಳಿಸಿದವರು.
ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ವಚನ ಚಳವಳಿಗೆ ಆಕರ್ಷಿತರಾಗಿ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಅಲ್ಲದೆ ಕಾಶ್ಮೀರ, ಅಫಘಾನಿಸ್ತಾನ ಮುಂತಾದ ಕಡೆಗಳಿಂದ ಅನೇಕ ಶರಣರು ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಅದೇರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗದ ಹತ್ತೆಂಟು ಜನ ಶರಣರು ಈ ಚಳವಳಿಯಲ್ಲಿ ಭಾಗವಹಿಸಿದ್ದರು. ವಚನ ಸಾಹಿತ್ಯದ ಮುಂಗೋಳಿ ಎಂದು ಕರೆಯಲಾಗುವ ಮುದನೂರಿನ ಜೇಡರ ದಾಸಿಮಯ್ಯ ಹಾಗೂ ವಚನ ವಸಂತದ ಕೋಗಿಲೆ ಎಂದು ಕರೆಯಲಾಗುವ ಕೊನೆಯ ವಚನಕಾರ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ತವರು ನೆಲ ಕಲ್ಯಾಣ ಕರ್ನಾಟಕ ಎಂಬುದು ಹೆಮ್ಮೆಯ ವಿಷಯ.
ತಾವು ಮಾಡುವ ಕಾಯಕವನ್ನೇ ತಮ್ಮ ಅಡ್ಡ ಹೆಸರುಗಳನ್ನಾಗಿ ಬಳಸುವುದರ ಮೂಲಕ ಜಾತಿ ನಿರ್ಮೂಲನೆಗೆ ತೊಡಗಿದ ಶರಣರು ತಮ್ಮ ಕಾಯಕದ ಉಪಕರಣಗಳಿಂದಲೇ ಅಧ್ಯಾತ್ಮವನ್ನು ಬೋಧಿಸಿದರು. ಸಾರ್ತಕ ಬದುಕಿಗೆ ಸೂತ್ರಗಳನ್ನು ಹೇಳಿದರು. ಕಾಯಕವೇ ಕೈಲಾಸ, ಕಾಯವೇ ಕೈಲಾಸ ಎಂದು ಕರೆಯುವ ಮೂಲಕ ದೇವರು, ಧರ್ಮ, ಸಮಾಜವನ್ನು ಕುರಿತು ತುಂಬಾ ವೈಜ್ಞಾನಿಕ ಮತ್ತು ವಾಸ್ತವಿಕ ವಿಚಾರಗಳನ್ನು ಹೇಳಿದ್ದಾರೆ. 12ನೇ ಶತಮಾನ ಎಂಬುದು ತಿರುವು ಮುರುವು ಆಗಿ 21ನೇ ಶತಮಾನ ಆಗಿರುವ ಈ ಸಂದರ್ಭದಲ್ಲೂ ಶರಣರ ವಿಚಾರಗಳು ಪ್ರಸ್ತುತವಾಗಿವೆ.
ಜೇಡರ ದಾಸಿಮಯ್ಯ:
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನ ಜೇಡರ ದಾಸಿಮಯ್ಯ ಹಾಗೂ ಇವರ ಸತಿ ದುಗ್ಗಳೆಯ ಕಾಯಕ ನೇಯ್ಗೆ ಆಗಿತ್ತು. ರಾಮನಾಥ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. 176 ವಚನಗಳು ದುಗ್ಗಳೆಯ ಎರಡು ವಚನಗಳು ಪ್ರಕಟವಾಗಿವೆ. ಜೇಡರ ದಾಸಿಮಯ್ಯ ಅವರನ್ನು ಆದ್ಯ ವಚನಕಾರ ಎಂದು ಗುರುತಿಸಲಾಗುತ್ತದೆ.
ಕೊಂಡಗುಳಿ ಕೇಶಿರಾಜ:
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೊಂಡಗುಳಿಯ ಕೇಶಿರಾಜ ಪ್ರತಿಭಾವಂತ ಕವಿ. ಲಿಂಗಾನುಭವ, ಶಿವಾನುಭವವನ್ನು ಬೋಧಿಸುವ ಮೂಲಕ ಜನರಲ್ಲಿ ಪರಿವರ್ತನೆ ತಂದ ಒಬ್ಬ ಶರಣ. ಕಂದ, ತ್ರವಿಧಿ, ರಗಳೆ, ದಂಡಕ, ಅಷ್ಟಕಗಳಲ್ಲಿ ಕಾವ್ಯ ರಚಿಸಿದ್ದಾರೆ. ಕೇಶಿರಾಜ ವಿಜಯಪುರ ಜಿಲ್ಲೆಯವರು ಎಂದು ಕೂಡ ಹೇಳಲಾಗುತ್ತಿದೆ.
ಕೆಂಭಾವಿ ಭೋಗಣ್ಣ:
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿಯ ಭೋಗಣ್ಣ ಬ್ರಾಹ್ಮಣರಾಗಿದ್ದರೂ ಲಿಂಗ ವ್ಯಸನಿ ಮತ್ತು ಶಿವ ವ್ಯಸನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ವೈದಿಕ ಆಚರಣೆಗಳಿಂದ ಬೇಸತ್ತ ಭೋಗಣ್ಣನವರು ಲಿಂಗ ದೀಕ್ಷೆ ಪಡೆಯುತ್ತಾರೆ.
ಚಂದಿಮರಸ:
ಬಸವಣ್ಣನವರ ಹಿರಿಯ ಸಮಕಾಲೀನರಾದ ಕೆಂಭಾವಿ ಭೋಗಣ್ಣ ಸಂಸ್ಥಾನದ ಅರಸರಾಗಿದ್ದರು. “ಸಿಮ್ಮಲಗಿ ಚೆನ್ನರಾಮ” ಅಂಕಿತದಲ್ಲಿ ಇವರು ಬರೆದಿರುವ 15 ವಚನಗಳು ಮಾತ್ರ ಪ್ರಕಟವಾಗಿವೆ. ಇವರು ದೀನ, ದಲಿತ, ಅಸ್ಪøಶ್ಯರನ್ನು ಬಹಳ ಹಚ್ಚಿಕೊಂಡಿದ್ದರು. ವಿಪ್ರ ಕರ್ಮಾಚರಣೆ ತೊರೆದು ಲಿಂಗಾಯತರಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಅಕ್ಕಮ್ಮ:
ಯಾದಗಿರಿಯ ಏಲೇಶ್ವರ (ಏಲೇರಿ)ದ ಅಕ್ಕಮ್ಮ ಒಕ್ಕಲುತನ ಮನೆಯ ಹಿನ್ನೆಲೆಯುಳ್ಳವರು. “ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ” ಅಂಕಿತದಲ್ಲಿ ಇವರು ಬರೆದಿರುವ 155 ವಚನಗಳು ದೊರೆತಿವೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮರ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ಕೃಷಿ, ಕಾಯಕ, ಆಚಾರದ ಕುರಿತು ಹೆಚ್ಚಿನ ವಚನಗಳನ್ನು ರಚಿಸಿದ್ದಾರೆ.
ಅರಿವಿನ ಮಾರಿ ತಂದೆ:
ಕಲ್ಯಾಣದ ಶರಣರಗಿದ್ದ ಅರವಿನ ಮಾರಿ ತಂದೆ “ಸದಾಶಿವಮೂರ್ತಿ” ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಹಿತಿ ಸಿಗುವುದಿಲ್ಲ. 309 ವಚನಗಳು ಪ್ರಕಟವಾಗಿವೆ. ಜನರಲ್ಲಿನ ಅರಿವು ಜಾಗೃತಗೊಳಿಸುವ ಕಾಯಕ ಇವರದಗಿತ್ತು.
ಅವಸರದ ರೇಕಣ್ಣ:
ಇವರು ಕೂಡ ಕಲ್ಯಾಣದ ಶರಣರಾಗಿದ್ದರು ಎಂದು ಹೇಳಾಗುತ್ತಿದೆ. “ಸದ್ಯೋಜಾತಲಿಂಗ” ಅಂಕಿತನಾಮದಲ್ಲಿ
ಇವರು ಬರೆದಿರುವ 104 ವಚನಗಳು ದೊರೆತಿವೆ.
ಕನ್ನದ ಮಾರಿತಂದೆ:
“ಮಾರನ ವೈರಿ ಮಾರೇಶ್ವರ” ಅಂಕಿತದಲ್ಲಿ ಬರೆದ ನಾಲ್ಕು ವಚನಗಳು ದೊರೆತಿವೆ. ಈತ ಕಳ್ಳತನ ಮಾಡಿಕೊಂಡಿದ್ದಾಗಲೂ ಸತ್ಯ, ಪ್ರಾಮಾಣಿಕತೆ ಇರಬೇಕು ಎಂದು ಹೇಳುತ್ತಾರೆ. ಇವರು ಕೂಡ ಕಲ್ಯಾಣ ಕರ್ನಾಟಕದವರು ಎಂದು ಹೇಳಾಗುತ್ತಿದೆ.
ಗುಪ್ತ ಮಂಚಣ್ಣ:
ಬಸವ ಕಲ್ಯಾಣದ ಬಳಿ ಇರುವ ನಾರಾಯಣಪುರ ಗ್ರಾಮದ ಗುಪ್ತ ಮಂಚಣ್ಣ ಬಿಜ್ಜಳನ ಆಸ್ಥಾನದಲ್ಲಿ ಕೊಂಡೆಯ ಕಾಯಕ ಮಾಡಿಕೊಂಡಿದ್ದ. ಗುಪ್ತ ರಾಯಭಾರಿಯಾಗಿದ್ದ. ಗುಪ್ತ ಶರಣ ಕೂಡ ಆಗಿದ್ದರು. “ನಾರಾಯಣಪ್ರಿಯ ರಾಮನಾಥ” ಅಂಕಿತದಲ್ಲಿ ಇವರ 99 ವಚನಗಳು ಪ್ರಕಟವಾಗಿವೆ.
ಬಹುರೂಪಿ ಚೌಡಯ್ಯ:
ಬೀದರ್ ತಾಲ್ಲೂಕಿನ ರೇಕುಳಕಿ ಗ್ರಾಮದವರು. ಹೊಟ್ಟೆಪಾಡಿಗಾಗಿ ಪೌರಾಣಿಕ ವೇಷ ಹಾಕುತ್ತಿದ್ದರು. ಬಸವಣ್ಣನವರ ವಿಚಾರ ಸ್ಪರ್ಶದಿಂದಾಗಿ ಶರಣರ ವೇಷ ಹಾಕಿ ಶರಣ ತತ್ವ, ಸಿದ್ಧಾಂತದ ಪ್ರಚಾರ, ಪ್ರದರ್ಶನ ಮಾಡುತ್ತಿದ್ದರು. “ರೇಕಣ್ಣ ಪ್ರಿಯ ನಾಗಿನಾಥ” ಎಂಬ ಅಂಕಿತದಲ್ಲಿ ಇವರು ಬರೆದ 66 ವಚನಗಳು ಈಗ ಲಭ್ಯ.
ಬಿಬ್ಬಿ ಬಾಚಯ್ಯ:
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೊಬ್ಬೂರು ಗ್ರಾಮದ ಬಿಬ್ಬಿ ಬಾಚಯ್ಯನವರು “ಏಣಾಂಕಧರ ಸೋಮೇಶ್ವರ” ಅಂಕಿತದಲ್ಲಿ 102 ವಚನಗಳನ್ನು ಬರೆದಿದ್ದಾರೆ. ಹಸಿವುಮುಕ್ತ ಭಾರತ ನಿರ್ಮಾಣ ಮಾಡಲು ಈತನ ಕಾಯಕ ಮತ್ತು ವಚನಗಳು ಸಹಾಯಕವಾಗಿವೆ.
ಲದ್ದೆಯ ಸೋಮಣ್ಣ:
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಾದಾ ಗ್ರಾಮದ ಲದ್ದೆಯ ಸೋಮಣ್ಣ ಹುಲ್ಲು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದರು. “ಭಾಪು ಲದ್ದೆಯ ಸೋಮ” ಅಂಕಿತದಲ್ಲಿ ಇವರು ಬರೆದ “ಆವ ಕಾಯಕವಾದಡೂ ಸ್ವಕಾಯಕವ ಮಾಡು” ಎಂಬ ಒಂದೇ ಒಂದು ವಚನ ದೊರೆತಿದೆ. ಈ ಒಂದು ವಚನದಲ್ಲಿಯೇ ಬದುಕಿನ ಮಹತ್ವ, ಕ್ಷಣಿಕತೆಯ ಕುರಿತು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ.
ಘಟ್ಟಿವಾಳಯ್ಯ:
ಬಸವಕಲ್ಯಾಣದ ಹತ್ತಿರವಿರುವ ಹಂದ್ರಾಳದ ಘಟ್ಟಿವಾಳಯ್ಯ ಒಬ್ಬ ನಿಷ್ಠುರ ಶರಣ. “ಚಿಕ್ಕಯ್ಯಪ್ರಿಯ ಸಿದ್ಧಲಿಂಗ” ಅಂಕಿತದಲ್ಲಿ ಇವರು ಬರೆದ 147 ವಚನಗಳು ಪ್ರಕಟವಾಗಿವೆ. ಈ ಗ್ರಾಮದಲ್ಲಿ ಇಂದಿಗೂ ಘಟ್ಟಿವಾಳಯ್ಯನ ಗವಿ ಇರುವುದನ್ನು ಕಾಣಬಹುದು.
ಬಾಚಿ ಕಾಯಕದ ಬಸವಯ್ಯ:
ಬೀದರ್ ಜಿಲ್ಲೆಯ ರಾಜೇಶ್ವರ ಗ್ರಾಮದ ಬಾಚಿ ಕಾಯಕದ ಬಸವಯ್ಯ ಮತ್ತು ಪುಣ್ಯಸ್ತ್ರೀ ಕಾಳವ್ವೆ ದಂಪತಿ ಬಸವಯ್ಯನ 31 ವಚನಗಳು ಕಾಳವ್ವೆಯ 2 ವಚನಗಳು ದೊರೆತಿವೆ. ಕರ್ಮಹರ ಕಾಳೇಶ್ವರ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ ಅಂಕಿತದಲ್ಲಿ ಇವರಿಬ್ಬರೂ ವಚನ ರಚನೆ ಮಾಡಿದ್ದು ಗಮನಾರ್ಹ.
ಆಯ್ದಕ್ಕಿ ಮಾರಯ್ಯ ದಂಪತಿ:
ಬಸವಣ್ಣನವರ ಸಮಕಾಲೀನರಾಗಿದ್ದ ಇವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುಡಗುಂಟಿ ಗ್ರಾಮದವರು. ಆಯ್ದಕ್ಕಿ ಲಕ್ಕಮ್ಮ ಇವರ ಪತ್ನಿ. ಶಿವಭಕ್ತರಾಗಿದ್ದ ಇವರು ಅಮರೇಶ್ವರಲಿಂಗ ಮತ್ತು ಮಾರಯ್ಯಪ್ರಿಯ ಅಮರೇಶ್ವರಲಿಂಗ ಅಂಕಿತದಲ್ಲಿ ವಚನ ರಚನೆ ಮಾಡಿರುವುದನ್ನು ಗುರುತಿಸಬಹುದಾಗಿದೆ.
ಷಣ್ಮುಖ ಶಿವಯೋಗಿ:
ಮೂರಾಬಟ್ಟೆಯಾಗಿದ್ದ ಬದುಕಿಗೆ ಮಾರ್ಗ ತೋರಿದ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ವಚನ ಚಳವಳಿಯ ಕೊನೆಯ ವಚನಕಾರ ಎಂದು ಗುರುತಿಸಲಾಗುತ್ತಿದೆ. ಅಖಂಡೇಶ್ವರ ವಚನಕಾಂಕಿತದಲ್ಲಿ ಇವರು ಬರೆದ ವಚನಗಳು ಚೆನ್ನಬಸವಣ್ಣನ ಷಟಸ್ಥಲ ಸಿದ್ಧಾಂತದ ಮತ್ತು ಬಸವಣ್ಣನವರ ಭಾವ ಹೋಲುತ್ತವೆ ಎಂದು ಪ್ರಾಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅದೇರೀತಿಯಾಗಿ ಬೊಕ್ಕಸದ ಚಿಕ್ಕಣ್ಣ, ಶರಣ ಮಧುವಯ್ಯ, ರಾಯಸದ ಮಂಚಣ್ಣ ಮತ್ತು ರಾಯಮ್ಮ, ವಚನ ಭಂಡಾರಿ ಶಾಂತರಸ, ಆಳಂದ ತಾಲ್ಲೂಕಿನ ಏಕಾಂತ ರಾಮಯ್ಯ, ನೆಲೋಗಿಯ ಕೋಲ ಶಾಂತಯ್ಯ, ಶಹಾಪುರ ತಾಲ್ಲೂಕಿನ ಸಗರದ ಬೊಮ್ಮಯ್ಯ, ಯಾದಗಿರಿ ತಾಲ್ಲೂಕಿನ ಏಲೇಶ್ವರದ ಕೇತಯ್ಯ. ಸಿಮಧನೂರು ತಾಲ್ಲೂಕಿನ ದೇವರ ಗುಡಿ ಗ್ರಾಮದ ಯಳಿಯುಮೇಶ್ವರ ಚಿಕ್ಕಯ್ಯ ಇತರರು ವಚನ ಪರಂಪರೆಗೆ ಕಲ್ಯಾಣ ಕರ್ನಾಕದಿಂದ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
–ಶಿವರಂಜನ್ ಸತ್ಯಂಪೇಟೆ, ಕಲಬುರಗಿ
ಮೊ.ನಂ. 9448204548 (ಕೃಪೆ: ಉದಯವಾಣಿ, ಕನ್ನಡ ಕಂಪು ಸಾಹಿತ್ಯ ಸಮ್ಮೇಳನ ವಿಶೇಷ ಸಂಚಿಕೆ)
ಅರಿವು ತುಂಬಿದ ಮಹಾಮನೆ ಮನಸ್ಸು ಇಂದ್ರಿಯ ಕರಮನಭಾವ ಪರೋಪಕಾರಬುದ್ಧಿ ಇರುವವರು ಬಸವಾದಿಶರಣರು ಅವರ ಜ್ಞಾನ ದಾಸೋಹ ಅನ್ನದಾಸೋಹ ಅರಿವು ತುಂಬಿದ ವಚನ ಸಾಹಿತ್ಯ ಪಚನವಾದರೆ ವಿಶ್ವಮೆಚ್ಚುವ ಸಾಹಿತ್ಯ ಮನೆ ಮನಗಳು ಬದುಕಿನ ಬುತ್ತಿ ಮರೆಯಬಾರದು
ಅಭಿನಂದನೆಗಳು, ನಿಮ್ಮ ಲೇಖನಕ್ಕೆ ಅಣ್ಣಾ, ನಿಮ್ಮ ಅಪ್ಪಾ ಮಾಡಿದ ಭಾಷಣ ನನಗೆ ನೆನಪಾಗಿದ್ದು ಈಗ. ನನ್ನ ವಿನತಿ ಸದಾ ನೀವು ಕ ಕ ರಾಜ್ಯ ಸ್ತಾಪನೆ ಮಾಡುವ ನಿಟ್ಟಿ ನಲ್ಲಿ ಲೇಖನ ಬರೆಯಲು ಕೋರಿಕೆ.